Advertisement

ಬೆಳ್ಳಿ ಗೆದ್ದಿದ್ದ ಮೀರಾಗೆ ಚಿನ್ನದ ಮೆರುಗು?

10:07 PM Jul 26, 2021 | Team Udayavani |

ಟೋಕಿಯೊ: ಮೊನ್ನೆ ಶನಿವಾರ ಭಾರತದ ಮೀರಾಬಾಯಿ ಚಾನು 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ವಿಚಿತ್ರವೆಂದರೆ ಅವರೀಗ ಇದೇ ವಿಭಾಗದಲ್ಲಿ ಚಿನ್ನ ಗೆಲ್ಲುವ ಸಾಧ್ಯತೆ ತೆರೆದುಕೊಂಡಿದೆ. ಅಂದು ಚಿನ್ನ ಗೆದ್ದಿದ್ದ ಚೀನಾದ ಝಿಹುಯಿ ಹೌ ಇನ್ನೊಮ್ಮೆ ಉದ್ದೀಪನ ಪರೀಕ್ಷೆಗೊಳಗಾಗಲಿದ್ದಾರೆ. ಒಂದು ವೇಳೆ ಅವರಿದರಲ್ಲಿ ವಿಫ‌ಲರಾದರೆ ಅವರು ಚಿನ್ನ ಕಳೆದುಕೊಳ್ಳಲಿದ್ದಾರೆ, ಮೀರಾ ಚಿನ್ನ ಪಡೆದುಕೊಳ್ಳಲಿದ್ದಾರೆ. ಇದೆಲ್ಲಾದರೂ ಸಾಧ್ಯವಾದರೆ ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ದೇಶದ ಏಕೈಕ ತಾರೆಯೆನಿಸಿಕೊಳ್ಳಲಿದ್ದಾರೆ.

Advertisement

ಶನಿವಾರ ಮೀರಾಬಾಯಿ 49 ಕೆಜಿಯಲ್ಲಿ ಒಟ್ಟು 202 ತೂಕವನ್ನು ಎತ್ತಿದ್ದರು. ಝಿಹುಯಿ 210 ಕೆಜಿ ಭಾರವೆತ್ತಿ, ಒಲಿಂಪಿಕ್ಸ್‌ ದಾಖಲೆ ನಿರ್ಮಿಸಿದ್ದರು. ಸ್ಪರ್ಧೆಗೂ ಮುನ್ನ ನಡೆಸಿದ ಉದ್ದೀಪನ ಪರೀಕ್ಷೆಯಲ್ಲಿ, ಸಂಶಯಾಸ್ಪದ ಸಂಗತಿಗಳು ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಗಮನಕ್ಕೆ ಬಂದಿವೆ. ಆದರೆ ಅವಿನ್ನೂ ಖಚಿತವಾಗಿಲ್ಲ. ಆದ್ದರಿಂದ ಇನ್ನೊಮ್ಮೆ ಪರೀಕ್ಷೆಗೊಳಗಾಗುವಂತೆ ಝಿಹುಯಿಗೆ ತಿಳಿಸಲಾಗಿದೆ. ಇಲ್ಲಿ ಝಿಹುಯಿ ವಿಫ‌ಲರಾದರೆ ಮೀರಾ ಚಿನ್ನ ಪಡೆದುಕೊಳ್ಳಲಿದ್ದಾರೆ. ಅಲ್ಲಿಗೆ ಒಲಿಂಪಿಕ್ಸ್‌ ಇತಿಹಾಸದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಕೇವಲ ಎರಡನೇ ತಾರೆಯೆನಿಸಿಕೊಳ್ಳಲಿದ್ದಾರೆ.

ಏನಿದು ಝಿಹುಯಿ ಸಮಸ್ಯೆ?: ಒಲಿಂಪಿಕ್ಸ್‌ನಲ್ಲಿ ಕೂಟಾರಂಭಕ್ಕೆ ಮುನ್ನವೇ ಎಲ್ಲ ಅಥ್ಲೀಟ್‌ಗಳಿಗೂ ಉದ್ದೀಪನ ಸೇವನೆ ಪರೀಕ್ಷೆ ನಡೆಸುವುದು ಮಾಮೂಲಿ. ಇಂತಹ ಔಷಧಿಗಳನ್ನು, ಪದಾರ್ಥಗಳನ್ನು ಸ್ವೀಕರಿಸಲೇಬಾರದು ಎಂದು ವಾಡಾ ಅಥ್ಲೀಟ್‌ಗಳಿಗೆ ಮೊದಲೇ ನಿರ್ಬಂಧ ಹೇರಿರುತ್ತದೆ. ಕೆಲವು ವಿನಾಯ್ತಿಗಳನ್ನೂ ನೀಡಿರುತ್ತದೆ. ಪ್ರಸ್ತುತ ಝಿಹುಯಿ ಮೇಲೆ ಈ ನಿರ್ಬಂಧಗಳನ್ನು ಪಾಲಿಸಿಲ್ಲ ಎಂಬ ಶಂಕೆಯಿಲ್ಲ. ಆದರೆ ಮೊದಲು ನಡೆಸಿದ ಉದ್ದೀಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ಏನೋ ಸಂಶಯಾಸ್ಪದ ಸಂಗತಿಗಳು ಕಂಡುಬಂದಿವೆ. ಆದ್ದರಿಂದ ಅದೇ ಮಾದರಿಯನ್ನು ಇನ್ನೊಮ್ಮೆ ಪರಿಶೀಲಿಸಲಾಗುತ್ತದೆ, ಹಾಗೆಯೇ ಮತ್ತೂಮ್ಮೆ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಎರಡನ್ನೂ ಪರಿಶೀಲಿಸಿ ಒಂದು ತೀರ್ಮಾನಕ್ಕೆ ಬರಲಾಗುತ್ತದೆ.

ಈ ತೀರ್ಪನ್ನು ಅಂತಾರಾಷ್ಟ್ರೀಯ ಕ್ರೀಡಾನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವೂ ಝಿಹುಯಿಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next