“ಮೈ ನಸ್ 3 ಪ್ಲಸ್ 1′ ಎಂಬ ಸಿನಿಮಾವೊಂದು ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ ತೆರೆಕಾಣುತ್ತಿದೆ. “ತಿಥಿ’ ಚಿತ್ರದ ಮೂಲಕ ಬೆಳಕಿಗೆ ಬಂದ ಅಭಿ ಈ ಸಿನಿಮಾದ ನಾಯಕ. ರಮೇಶ್ ಯಾದವ್ ಈ ಚಿತ್ರದ ನಿರ್ದೇಶಕ. ನಿರ್ದೇಶನದ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ರಮೇಶ್, “ಇದು ತುಂಬಾ ಭಿನ್ನ ಕಥೆ ಹೊಂದಿರುವ ಸಿನಿಮಾ. ನಾಯಕ ಅಭಿ ಈ ಹಿಂದೆ ನಟಿಸಿದ ಸಿನಿಮಾಗಳಿಗಿಂತ ತುಂಬಾ ವಿಭಿನ್ನವಾಗಿದ್ದು, ಹೊಸ ಬಗೆಯ ಸಿನಿಮಾವನ್ನು ಜನ ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವಿದ ‘ ಎನ್ನುವುದು ನಿರ್ದೇಕರ ಮಾತು.
ಎಲ್ಲಾ ಓಕೆ ಈ ಟೈಟಲ್‌ಗೂ ಕಥೆಗೂ ಏನು ಸಂಬಂಧ ಎಂದರೆ ಅದು ಸಿನಿಮಾದ ಹೈಲೈಟ್ ಅಂತಾರೆ ರಮೇಶ್. ಮೂವರು ಹುಡುಗ ಹಾಗೂ ಒಂದು ಹುಡುಗಿ ಸುತ್ತ ನಡೆಯುವ ಸಿನಿಮಾ ಇದಾಗಿದ್ದು, ಹುಡುಗಿಯೊಬ್ಬಳನ್ನು ಮೂವರು ಹುಡುಗರು ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎಂಬ ಅಂಶದೊಂದಿಗೆ ಆರಂಭವಾಗುವ ಸಿನಿಮಾ,ಪ್ರೀತಿ ಪಾಠದೊಂದಿಗೆ ಅಂತ್ಯವಾಗುತ್ತದೆಯಂತೆ. ಭಿನ್ನ ಮನಸ್ಥಿತಿಯ ನಾಯಕನಿಗೆ ನಾಯಕಿ ಹೇಗೆ ಪ್ರೀತಿ ಪಾಠ ಮಾಡುತ್ತಾಳೆಂಬುದು ಸಸ್ಪೆನ್ ಮತ್ತು ಹೈಲೈಟ್ ಎಂಬುದು ನಿರ್ದೇಶಕರ ಮಾತು.
ಈ ಚಿತ್ರವನ್ನು ಸತ್ಯನಾರಾಯಣಾಚಾರ್ ನಿರ್ಮಿಸಿದ್ದಾರೆ. ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ನಿರ್ಮಿಸಿದ್ದಾಗಿ ಹೇಳುವ ಅವರಿಗೆ ಈ ಚಿತ್ರ ಹಿಟ್ ಆಗುವ ವಿಶ್ವಾಸವೂ ಇದೆ. ಇನ್ನು ಚಿತ್ರದಲ್ಲಿ ನಟಿಸಿದ ಅಭಿಗೆ ಇಲ್ಲಿ ಡ್ಯಾನ್ಸ್, ಫೈಟ್ ಮಾಡುವ ಅವಕಾಶವೂ ಸಿಕ್ಕಿದೆ. ಅದಕ್ಕಾಗಿ ಸುಮಾರು 25 ದಿನಗಳ ಕಾಲ ರಿಹರ್ಸಲ್ ಕೂಡಾ ನಡೆಸಿದ್ದಾರಂತೆ. “ಆರಂಭದಲ್ಲಿ ನನಗೆ ಈ ಪಾತ್ರ ಮಾಡಲು ತುಂಬಾ ಕಷ್ಟವಾಯಿತು.
“ನನ್ನನ್ನು ಬಿಟ್ಟು ಬಿಡಿ ನಾನು ಊರಿಗೆ ಹೋಗುತ್ತೇನೆ’ ಎಂದೆ. ಕೊನೆಗೆ ಪಾತ್ರಕ್ಕೆ ಹೊಂದಿಕೊಂಡೆ’ ಎನ್ನುವುದು ಅಭಿ ಮಾತು. ಚಿತ್ರದಲ್ಲಿ ಸಸ್ಯಾ ನಾಯಕಿಯಾಗಿ ನಟಿಸಿದ್ದು, ತಂದೆ ತಾಯಿ ಪ್ರೀತಿಗೆ ಆದ್ಯತೆ ಕೊಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ.