ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಾಲೆ – ಕಾಲೇಜು, ವಸತಿ ಶಾಲೆ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಸೂಚಿಸಿದ್ದಾರೆ.
ಸೋಮವಾರ ಅಬುಲ್ ಕಲಾಂ ಅಜಾದ್ ಭವನದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಯಾವುದೇ ಹಂತದಲ್ಲೂ ಶಾಲೆ ಅಥವಾ ಕಾಲೇಜು ಶಿಕ್ಷಣದಿಂದ ವಂಚಿತರಾಗದಂತೆ ಪ್ರಮುಖವಾಗಿ ಉನ್ನತ ಶಿಕ್ಷಣ ವೇಳೆ ಡ್ರಾಪ್ ಔಟ್ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿ ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತದ ಸಮಗ್ರ ಮಾಹಿತಿ ಒದಗಿಸುವಂತೆ ಸೂಚಿಸಿದ ಅವರು, ಇನ್ಮುಂದೆ ಕಾಲೋನಿಗಳ ಅಭಿವೃದ್ಧಿ ಪ್ರಸ್ತಾವನೆ ಬಂದರೆ ಸ್ಥಳಕ್ಕೆ ಹೋಗಿ ಆ ಕಾಮಗಾರಿಯ ಅಗತ್ಯದ ಬಗ್ಗೆ ಪರಿಶೀಲಿಸಿ ವರದಿ ಕೊಡಲು ತಜ್ಞರ ತಂಡ ರಚನೆಗೆ ಸೂಚಿಸಿದ ಸಚಿವರು, ಕಾಮಗಾರಿ ಪೂರ್ಣಗೊಂಡು ಬಿಲ್ ಪಾವತಿ ಹಂತದಲ್ಲೂ ಇದೇ ತಂಡ ಪರಿಶೀಲಿಸಿ ವರದಿ ನೀಡುವಂತಾಗಬೇಕು ಎಂದು ಹೇಳಿದರು.
ಶಾದಿ ಮಹಲ್‌ಗೆ ಅನುದಾನದ ಕೊರತೆ: ರಾಜ್ಯದಲ್ಲಿ ಅಪೂರ್ಣಗೊಂಡಿರುವ 126 ಶಾದಿ ಮಹಲ್ ಗಳ ಕಾಮಗಾರಿ ಪೂರ್ಣ ಗೊಳಿಸಲು 56 ಕೋಟಿ ರೂ. ಅಗತ್ಯವಾಗಿದ್ದು ಅನುದಾನದ ಕೊರತೆ ಇರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಜತೆಗೆ ಹೊಸದಾಗಿ ಶಾದಿ ಮಹಲ್ ನಿರ್ಮಾಣಕ್ಕೆ ಬೇಡಿಕೆ ಇರುವ ಬಗ್ಗೆಯೂ ಗಮನಕ್ಕೆ ತಂದರು.
ಹಜ್ ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ: ಹಜ್ ಭವನವನ್ನು ವರ್ಷದ ಹತ್ತು ತಿಂಗಳು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಐಎಸ್ ಹಾಗೂ ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡುವ ಕೇಂದ್ರ ವನ್ನಾಗಿ ಪರಿವರ್ತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಅದೇ ರೀತಿ ಮೌಲಾನ ಅಜಾದ್ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಭಾಷೆ ಕಲಿಕೆ ವಿಚಾರದಲ್ಲಿ ಇಂಗ್ಲಿಷ್ ಜತೆಗೆ ಕನ್ನಡ ಕಲಿಕೆಗೂ ಹೆಚ್ಚು ಒತ್ತು ನೀಡಲು ಸಚಿವರು ಸೂಚನೆ ನೀಡಿದರು.ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ರಾಘವೇಂದ್ರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಲ್ಪ್ ಲೈನ್ ನಿರ್ವಹಣೆ ಸಿಬ್ಬಂದಿಗೆ 4 ಲಕ್ಷ ವೇತನ: ತನಿಖೆಗೆ ಆದೇಶ
ಬೆಂಗಳೂರು: ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಸ್ಥಾಪಿಸಲಾಗಿದ್ದ ಹೆಲ್ಪ್ಲೈನ್ ನಿರ್ವಹಿಸುವ ಒಬ್ಬ ಸಿಬ್ಬಂದಿಗೆ ತಿಂಗಳಿಗೆ ಬರೋಬ್ಬರಿ ನಾಲ್ಕು ಲಕ್ಷ ರೂ. ವೇತನ ನೀಡಿರುವ ಪ್ರಕರಣವೊಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಇದರ ಸಮಗ್ರ ತನಿಖೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಆದೇಶಿಸಿದ್ದಾರೆ.
ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದ್ದು, ಅಲ್ಪಸಂಖ್ಯಾತರ ಇಲಾಖೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹೆಲ್ಪ…ಲೈನ್ ಸ್ಥಾಪಿಸಿ ಅದರ ನಿರ್ವಹಣೆ ಮಾಡಿದ ಒಬ್ಬರಿಗೆ ತಿಂಗಳಿಗೆ ನಾಲ್ಕು ಲಕ್ಷ ರೂ. ವೇತನ ನೀಡಿರುವ ಬಗ್ಗೆ, ಅದರಿಂದ ಪ್ರಯೋಜನ ಆಗದಿದ್ದರೂ ಮುಂದುವರಿಸಿದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವರು ಆದೇಶ ನೀಡಿದರು.