ಬಟಿಂಡಾ: ಸೆಂಟ್ರಲ್ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ನನ್ನು ನೋಡಲೆಂದು ಇಬ್ಬರು ಅಪ್ರಾಪ್ತ ಬಾಲಕಿಯರು ಮನೆಯಿಂದ ಪರಾರಿಯಾಗಿ ಜೈಲಿಗೆ ತೆರಳಿದ ಘಟನೆ ನಡೆದಿದೆ.
ಜೈಲಿನ ಹೊರಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಜೈಲು ಆಡಳಿತ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಗೆ ಒಪ್ಪಿಸಿದೆ. ಬಟಿಂಡಾದ ಮಕ್ಕಳ ರಕ್ಷಣಾ ಅಧಿಕಾರಿ ರವನೀತ್ ಕೌರ್ ಸಿಧು ಮಾತನಾಡಿ, ಹುಡುಗಿಯರು ಬಟಿಂಡಾ ಸೆಂಟ್ರಲ್ ಜೈಲಿನ ಹೊರಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅವುಗಳನ್ನು ತಮ್ಮ ಸ್ನೇಹಿತರ ವಲಯಗಳಲ್ಲಿ ಕಳುಹಿಸಲು ಬಯಸಿದ್ದರು. ಈ ಬಾಲಕಿಯರು ಸಾಮಾಜಿಕ ಮಾಧ್ಯಮದಲ್ಲಿ ಲಾರೆನ್ಸ್ ಬಿಷ್ಣೋಯ್ ನಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:PMO ಕಚೇರಿಯ ಅಧಿಕಾರಿ ಅಂತ ಹೇಳಿ ಜಮ್ಮುವಿನಲ್ಲಿ ಯೋಧರು, ಅಧಿಕಾರಿಗಳನ್ನೇ ಯಾಮಾರಿಸಿದ ವಂಚಕ!
“ಅಪ್ರಾಪ್ತ ಬಾಲಕಿಯರು ತಮ್ಮ ಮನೆಯಲ್ಲಿ ಸುಳ್ಳು ಹೇಳಿ ಬಟಿಂಡಾ ತಲುಪಿದ್ದಾರೆ. ಇಬ್ಬರೂ ಬಟಿಂಡಾ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದರು. ಅವರ ಸ್ನೇಹಿತರು, ಅವರೆಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಲಾರೆನ್ಸ್ ಬಿಷ್ಣೋಯ್ ನಿಂದ ಪ್ರಭಾವಿತರಾಗಿದ್ದಾರೆ. ಬಿಷ್ಣೋಯ್ ನನ್ನು ಬಟಿಂಡಾ ಜೈಲಿನಲ್ಲಿ ಇರಿಸಲಾಗಿದೆ. ಹೀಗಾಗಿ ಇವರುಗಳು ಬಟಿಂಡಾ ಸೆಂಟ್ರಲ್ ಜೈಲಿನ ಹೊರಗೆ ಸೆಲ್ಫಿ ತೆಗೆದು ಅದನ್ನು ಸ್ನೇಹಿತರಿಗೆ ತೋರಿಸುವ ಉದ್ದೇಶ ಹೊಂದಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ” ಎಂದು ರವನೀತ್ ಕೌರ್ ಸಿಧು ಹೇಳಿದ್ದಾರೆ.
Related Articles
ಬಾಲಕಿಯರ ಮನೆಯವರನ್ನು ಕರೆಸಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಇಬ್ಬರೂ ಹುಡುಗಿಯರನ್ನು ಸಫಿ ಸೆಂಟರ್ ಗೆ ಕಳುಹಿಸಲಾಗಿದೆ. ಇಡೀ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.