ಬೆಂಗಳೂರು: ತಾನು ಪ್ರೀತಿಸುತ್ತಿದ್ದ ವಿದ್ಯಾರ್ಥಿನಿಗೆ ತನ್ನ ಪ್ರೀತಿ ವಿಚಾರ ತಿಳಿಸಿ, ತನ್ನನ್ನೇ ಮದುವೆಯಾಗುವಂತೆ ಒಪ್ಪಿಸಲು ಮತ್ತೂಬ್ಬ ವಿದ್ಯಾರ್ಥಿನಿಗೆ ಅಪ್ರಾಪ್ತನೊಬ್ಬ ಚಾಕು ತೋರಿಸಿ ಹೆದರಿಸಿ, ಕಿರುಕುಳ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಮಧ್ಯ ಪ್ರವೇಶದಿಂದ (ಎನ್‌ಸಿಪಿಸಿಆರ್) ಆರೋಪಿತನ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಜನವರಿ 25ರಂದು ಮಧ್ಯಾಹ್ನ ಘಟನೆ ನಡೆದಿದ್ದು, ಸಂತ್ರಸ್ತ ಬಾಲಕಿಯ ತಂದೆ ಎನ್ ಸಿಪಿಸಿಆರ್‌ಗೆ ಇ-ಮೇಲ್ ಮುಖಾಂತರ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗ, ಕೂಡಲೇ ಘಟನೆ ಸಂಬಂಧ ಕ್ರಮ ಕೈಗೊಳ್ಳುವಂತೆ ನೀಡಿದ ಸೂಚನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು, ಸಂತ್ರಸ್ತೆಯಿಂದ ಘಟನೆ ಬಗ್ಗೆ ವಿವರ ಪಡೆದು, ಆರೋಪಿತ ಅಪ್ರಾಪ್ತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯು 15 ವರ್ಷದವನಾಗಿದ್ದು, ಖಾಸಗಿ ಶಾಲೆಯೊಂದರ ಬಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಜತೆಗೆ, ಪ್ರಕರಣ ಸಂಬಂಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಲಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತ ವಿದ್ಯಾರ್ಥಿನಿ, ಜ.25ರಂದು ಮಧ್ಯಾಹ್ನ ಒಬ್ಬರೇ ನಡೆದು ಹೋಗುವಾಗ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದ್ದ ಆರೋಪಿ, “ನಿಮ್ಮ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ನಾನು ಪ್ರೀತಿಸುತ್ತಿದ್ದೇನೆ. ಈ ವಿಚಾರವನ್ನು ಆಕೆಗೆ ತಿಳಿಸಬೇಕು. ಇಲ್ಲದಿದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಚಾಕು ತೋರಿಸಿ ಬೆದರಿಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ ನಾಲ್ಕು ಗಂಟೆಯಾದರು ಮಗಳು ಮನೆಗೆ ಬಾರದ್ದರಿಂದ ಆಕೆಯನ್ನು ಕರೆದುಕೊಂಡು ಬರಲು ಅವರ ತಂದೆ ಶಾಲೆ ಬಳಿ ತೆರಳುತ್ತಿದ್ದಾಗ ರಸ್ತೆಯ ಸಮೀಪ ಮಗಳು ಅಳುತ್ತಾ ಬರುತ್ತಿರುವುದು ಕಂಡುಬಂದಿದೆ. ಕೂಡಲೇ ಮನೆಗೆ ಕರೆದೊಯ್ದು ವಿಚಾರಿಸಿದಾಗ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಹೀಗಾಗಿ ವಿದ್ಯಾರ್ಥಿನಿಯ ತಂದೆ ಎನ್‌ಸಿಪಿಸಿಆರ್‌ಗೆ ದೂರು ನೀಡಿದ್ದರು ಎಂದು ಅಧಿಕಾರಿ ಹೇಳಿದರು.