Advertisement

ಶೆಟ್ಟಿಕಜೆ ಸೇತುವೆ ಬೇಡಿಕೆಗೆ ಸಚಿವರ ಸ್ಪಂದನೆ

12:13 AM Jul 08, 2019 | Team Udayavani |

ಸುಬ್ರಹ್ಮಣ್ಯ: ಕಲ್ಮಕಾರು ಗ್ರಾಮದ ಶೆಟ್ಟಿಕಜೆ ಎನ್ನುವಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಿಸಲು ಅನುದಾನ ನೀಡುವಂತೆ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಅವರು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ನೀಡಿರುವ ಮನವಿಗೆ ಸಚಿವಾಲಯದಿಂದ ಸ್ಪಂದನೆ ದೊರಕಿದೆ.

Advertisement

ಸಚಿವ ಎಚ್.ಡಿ. ರೇವಣ್ಣ ಸರಕಾರದ ಕಾರ್ಯದರ್ಶಿ ಹಾಗೂ ಲೋಕೋ ಪಯೋಗಿ ಇಲಾಖೆಗೆ ಪತ್ರ ಮುಖೇನ ಸೂಚನೆ ನೀಡಿದ್ದು, ಎಸ್‌ಸಿಪಿ ಅಥವಾ ಟಿಎಸ್‌ಪಿ ಯೋಜನೆಯಡಿ ತುರ್ತಾಗಿ ಶೆಟ್ಟಿಕಜೆ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಅಂದಾಜುಪಟ್ಟಿ ಸಿದ್ಧಪಡಿಸಿ ಅನುದಾನ ಮೀಸಲಿಟ್ಟು ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಶೆಟ್ಟಿಕಜೆ ಎನ್ನುವಲ್ಲಿ ಹರಿಯುವ ಹೊಳೆಗೆ ಸೇತುವೆಯಿಲ್ಲದೆ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದರು. ಅಂಜನಕಜೆ, ಕೊಪ್ಪಡ್ಕ, ಗುಳಿಕಾನ, ಗುಡ್ಡೆಕಾನ, ಪೆರ್ಮುಕಜೆ ಭಾಗಗಳನ್ನು ತಲುಪಲು ಶೆಟ್ಟಿಕಜೆ ಹೊಳೆ ದಾಟುವಲ್ಲಿ ತೊಂದರೆ ಇತ್ತು. ಮಳೆಗಾಲದಲ್ಲಿ ನಿತ್ಯ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಅಂಗನವಾಡಿ, ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು ಸಮಸ್ಯೆಗೆ ಒಳಗಾಗುತ್ತಿದ್ದರು.

ತಹಶೀಲ್ದಾರ್‌ ಭೇಟಿ ನೀಡಿದ್ದರು
ಮಳೆಗಾಲದ ವೇಳೆ ಸ್ಥಳೀಯರು ತಾತ್ಕಾಲಿಕ ಬಿದಿರಿನ ತೂಗು ಸೇತುವೆ ನಿರ್ಮಿಸಿಕೊಳ್ಳುತ್ತಿದ್ದರು. 40 ವರ್ಷಗಳಿಂದ ಇದ್ದ ಬೇಡಿಕೆ ಈಡೇರಿರಲಿಲ್ಲ. ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಭರವಸೆ ನೀಡಿ ಬರುತ್ತಿದ್ದರೇ ಹೊರತು ಸಮಸ್ಯೆ ಪರಿಹಾರ ಕಾಣುವ ಲಕ್ಷಣಗಳು ಗೋಚರಿಸುತ್ತಿರಲಿಲ್ಲ. ಲೋಕಸಭಾ ಚುನಾವಣೆ ಹೊತ್ತಲ್ಲಿ ಈ ಭಾಗದ ನಾಗರಿಕರು ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರು. ಈ ವೇಳೆ ಸುಳ್ಯ ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಅರಿತಿದ್ದರು. ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸಿದ್ದರು.

ಸೇತುವೆ ನಿರ್ಮಾಣಕ್ಕೆ ಹೆಚ್ಚು ಅನುದಾನದ ಆವಶ್ಯಕತೆ ಇರುವ ಕಾರಣ ಅವರ ಪ್ರಯತ್ನ ಫಲಿಸಿರಲಿಲ್ಲ. ಹೀಗಾಗಿ, ಪ್ರಸ್ತಾಪ ನನೆಗುದಿಗೆ ಬಿದ್ದಿತು.

Advertisement

ಸ್ಪಂದಿಸಿದ ರೇವಣ್ಣ
ಇಲ್ಲಿ ಸೇತುವೆ ಆಗಬೇಕೆಂದು ಸ್ಥಳೀಯರು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಅವರಿಗೆ ಮನವಿ ಮಾಡಿದ್ದರು. ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿದ ಎಂ.ಬಿ. ಸದಾಶಿವ, ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಮನವಿ ಮಾಡಿದ್ದರು. ಅವರು ಸ್ಪಂದಿಸಿದ್ದಾರೆ ಎಂದು ಸದಾಶಿವ ತಿಳಿಸಿದ್ದಾರೆ.

‘ಉದಯವಾಣಿ’ಯೂ ಪ್ರಯತ್ನಿಸಿತ್ತು
ಶೆಟ್ಟಿಕಜೆ ಸೇತುವೆ ಈ ಭಾಗದ ನಾಗರಿಕರ ಬಹುಕಾಲದ ಬೇಡಿಕೆ. ಪ್ರತಿ ಮಳೆಗಾಲದಲ್ಲಿ ಇಲ್ಲಿನ ಸಮಸ್ಯೆ ಕುರಿತು ‘ಉದಯವಾಣಿ’ ವರದಿ ಪ್ರಕಟಿಸಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿದೆ. ಇತ್ತೀಚೆಗೆ ಮತ್ತೂಮ್ಮೆ ವರದಿ ಪ್ರಕಟಿಸಿದ ಬಳಿಕ ಸೇತುವೆ ನಿರ್ಮಾಣದ ಪ್ರಯತ್ನಗಳಿಗೆ ವೇಗ ಸಿಕ್ಕಿತ್ತು. ಈಗ ಲೋಕೋಪಯೋಗಿ ಸಚಿವರೇ ಸ್ಪಂದಿಸಿರುವ ಕಾರಣ ಈ ಬಾರಿ ಸೇತುವೆ ಕನಸು ನನಸಾಗುವ ವಿಶ್ವಾಸ ಜನರಲ್ಲಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next