Advertisement
ಹಳೇ ಮೈಸೂರು ಭಾಗದ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿ ರಾಜಕೀಯ ರಣತಂತ್ರ ಹೆಣೆಯುತ್ತಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯಕ್ಕೆ ಭೇಟಿ ನೀಡಿ, ರಾಜಕೀಯ ರಣಕಹಳೆ ಮೊಳಗಿಸಿದ್ದಾರೆ. ಅಲ್ಲದೆ, ನಿರಂತರವಾಗಿ ಮಂಡ್ಯ ಜಿಲ್ಲೆಯನ್ನೇ ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ ಪ್ರಮುಖ ಸಮಾವೇಶಗಳನ್ನು ಮಂಡ್ಯದಿಂದಲೇ ಆರಂಭಿಸುತ್ತಿದ್ದಾರೆ. ಆದರೆ, ಮಂಡ್ಯ ಉಸ್ತುವಾರಿ ಸಚಿವ ಸ್ಥಾನ ನೇಮಕ ಕಗ್ಗಂಟಾಗಿ ಪರಿಣಮಿಸಿದೆ.
Related Articles
Advertisement
ಇದರಿಂದ ಬೇಸರಗೊಂಡಿರುವ ಆರ್.ಅಶೋಕ್, ಜವಾಬ್ದಾರಿ ಹೆಚ್ಚಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ವಿಮುಕ್ತಿಗೊಳಿಸುವಂತೆ ಸಿಎಂಗೆ ಪತ್ರ ಬರೆದಿದ್ದರು.
ಚುನಾವಣೆ ಸೋಲಿಗೆ ನಾರಾಯಣಗೌಡ ಬದಲಾವಣೆ: ಕಳೆದ ಬಾರಿ ನಡೆದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ದಿಢೀರನೆ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೆ.ಸಿ.ನಾರಾಯಣಗೌಡರನ್ನು ಬದಲಾವಣೆ ಮಾಡಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಯಿತು. ಚುನಾವಣೆಯಲ್ಲಿ ಸಚಿವ ಕೆ.ಸಿ. ನಾರಾಯಣಗೌಡ, ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಯಿತು ಎಂಬ ಆರೋಪಗಳು ಕೇಳಿ ಬಂದಿದ್ದವು.
ದಿಢೀರನೆ ಗೋಪಾಲಯ್ಯ ಬದಲಾವಣೆ: ಕಳೆದ ಆರು ತಿಂಗಳಿನಿಂದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಗೋಪಾಲಯ್ಯ ಅವರನ್ನು ಕಳೆದ ಜನವರಿಯಲ್ಲಿ ದಿಢೀರ್ ಬದಲಾವಣೆ ಮಾಡಲಾಯಿತು. ಹಳೇ ಮೈಸೂರು ಭಾಗದ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂಬ ಹಿನ್ನೆಲೆಯಲ್ಲಿ 2022ರ ಡಿಸೆಂಬರ್‌ನ ಕೊನೇ ವಾರದಲ್ಲಿ ಅಮಿತ್ ಶಾ ಜಿಲ್ಲೆಗೆ ಭೇಟಿ ನೀಡಿದ ಒಂದೇ ತಿಂಗಳಲ್ಲಿ ಉಸ್ತುವಾರಿ ಬದಲಾಯಿಸಲಾಗಿತ್ತು. ಆ ಜಾಗಕ್ಕೆ ಹಾಗೂ ಪಕ್ಷ ಸಂಘಟನೆಗಾಗಿಯೇ ಆರ್.ಅಶೋಕ್ ಅವರನ್ನು ಮತ್ತೆ ನೇಮಕ ಮಾಡಲಾಯಿತು. ಆದರೆ, ಅದೂ ಫಲಿಸದಂತಾಗಿದೆ.
ಜವಾಬ್ದಾರಿ ಯಾರ ಹೆಗಲಿಗೆ? : ಚುನಾವಣೆ ಹತ್ತಿರವಾಗುತ್ತಿರುವುದರಿಂದ ಮಂಡ್ಯದಲ್ಲಿ ಕೇಸರಿ ಬಾವುಟ ಹಾರಿಸಲು ಮುಂದಾಗಿರುವ ಬಿಜೆಪಿ ಸಮರ್ಥ ಸಚಿವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಸಚಿವರಾದ ಆರ್.ಅಶೋಕ್, ಕೆ.ಸಿ.ನಾರಾಯಣಗೌಡ ಬೇಡ ಎಂದಿದ್ದಾರೆ. ಉಳಿದಿರುವುದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಶ§ನಾರಾಯಣ ಹಾಗೂ ಕೆ.ಗೋಪಾಲಯ್ಯ ಅವರಿಗೆ ನೀಡಬೇಕಾಗಿದೆ. ಇಲ್ಲದಿದ್ದರೆ ಬೇರೆ ಸಚಿವರಿಗೆ ಜವಾಬ್ದಾರಿ ನೀಡಬೇಕಾಗಿದೆ. ಒಟ್ಟಾರೆ ಯಾರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ ಕಾದು ನೋಡಬೇಕು.
ಬೇಸತ್ತು ಉಸ್ತುವಾರಿ ಬೇಡ ಎಂದ ಸಚಿವ ನಾರಾಯಣಗೌಡ : ಮೂರು ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತಿದೆ. ಆದ್ದರಿಂದ ನನಗೆ ಸದ್ಯಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಡ. ಅಲ್ಲದೆ, ನನಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದರಿಂದ ಅಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇನೆ. ಅಲ್ಲಿಯೂ ಅರ್ಧ ಕೆಲಸ, ಇಲ್ಲಿಯೂ ಅರ್ಧ ಕೆಲಸವಾಗಲಿದೆ. ಇದರಿಂದ ಯಾವ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ನನಗೆ ಮಂಡ್ಯ ಉಸ್ತುವಾರಿ ಬೇಡ. ಯಾರೇ ಬಂದರೂ ಅವರಿಗೆ ಸಹಕಾರ ನೀಡುವೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಸಿಎಂ ನಿರ್ಧರಿಸಲಿ ಎಂದ ಸಚಿವ ಡಾ.ಅಶ್ವತ್ಥನಾರಾಯಣ : ಇತ್ತೀಚೆಗೆ ಸಾತನೂರಿನ ಕಂಬದ ನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಮಹಾಶಕ್ತಿ ಕೇಂದ್ರದ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದು ಸಿಎಂಗೆ ಬಿಟ್ಟ ವಿಚಾರ. ಅವರಿಗೆ ಅಧಿಕಾರವಿದೆ. ಯಾರಿಗೆ ಬೇಕಾದರೂ ಕೊಡಬಹುದು. ನನಗೆ ರಾಮನಗರದಲ್ಲಿ ರಾಮದೇವರ ಬೆಟ್ಟ ಅಭಿವೃದ್ಧಿಪಡಿಸುವ ಜವಾಬ್ದಾರಿ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಉಸ್ತುವಾರಿ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
– ಎಚ್.ಶಿವರಾಜು