ಬೆಂಗಳೂರು: ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮತ್ತು ಸಣ್ಣ ನೀರಾವರಿ ಸಚಿವ ಸಿ.ಪಿ. ಯೋಗೇಶ್ವರ್ ಚಿಕ್ಕಮಗಳೂರು ಬಳಿಯ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದು ಖಾತೆ ಹಂಚಿಕೆ ಅಸಮಾಧಾನ ಹೊಗೆಯಾಡುತ್ತಿರುವ ಸಮಯದಲ್ಲಿ ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ.
ಇವರಿಬ್ಬರೊಂದಿಗೆ ಆರೋಗ್ಯ ಸಚಿವ ಡಾ| ಸುಧಾಕರ್, ಎಂ.ಟಿ.ಬಿ. ನಾಗರಾಜ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮತ್ತು ನಾಲ್ಕೈದು ಶಾಸಕರು ಇದ್ದರು ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಸಚಿವರು ರೆಸಾರ್ಟ್‌ನಲ್ಲಿ ಇರುವುದನ್ನು ತಿಳಿದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಭೇಟಿ ನೀಡಿದ್ದರು. ತಾವು ವಾಸ್ತವ್ಯ ಹೂಡಿ ಸಭೆ ನಡೆಸಿರುವುದು ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಯೋಗೇಶ್ವರ್ ಮತ್ತು ಜಾರಕಿಹೊಳಿ ಅಲ್ಲಿಂದ ತೆರಳಿದರು ಎನ್ನಲಾಗಿದೆ.
ಜಾರಕಿಹೊಳಿ ತಮ್ಮ ಸರಕಾರಿ ಕೆಲಸದ ನಿಮಿತ್ತ ಚಿಕ್ಕಮಗಳೂರಿಗೆ ತೆರಳಿ ವಾಸ್ತವ್ಯ ಹೂಡಿದ್ದರು, ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು ತಮ್ಮ ಕ್ಷೇತ್ರಗಳ ಯೋಜನೆಗಳ ಕುರಿತು ಚರ್ಚಿಸಲು ಆಗಮಿಸಿದ್ದರು ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.
ಸಭೆ ನಡೆಸಿಲ್ಲ :
ಯಾವುದೇ ಸಭೆ ನಡೆಸಿಲ್ಲ ಎಂದು ರಮೇಶ್ ಜಾರಕಿ ಹೊಳಿ ಸ್ಪಷ್ಟಪಡಿಸಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಜಾರಕಿಹೊಳಿ ಅವರ ಜತೆ ರಾಜಕೀಯ ಚರ್ಚೆ ಮಾಡಿಲ್ಲ ಎಂದಿದ್ದಾರೆ.