Advertisement

ರಾಜಕಾಲುವೆ ಸ್ವಚ್ಛತೆಗೆ ಸಚಿವರ ಸೂಚನೆ

01:05 PM Nov 05, 2019 | Team Udayavani |

ಬೆಳಗಾವಿ: ನಗರದಲ್ಲಿ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿರುವ ರಾಜಕಾಲುವೆಗಳನ್ನು ತಕ್ಷಣದಿಂದಲೇ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

Advertisement

ಬೆಳಗಾವಿ ಹೊರವಲಯದ ಬಸವನಕುಡಚಿ, ಬಳ್ಳಾರಿ ನಾಲಾ ಬಳಿಯ ಪಾಟೀಲ ಮಾಳ, ಜಕ್ಕೇರಿ ಹೊಂಡ ಸೇರಿ ಸೇರಿದಂತೆ ನಗರದಲ್ಲಿ ಅತಿಯಾದ ಮಳೆ ಹಾಗೂ ನೆರೆ ಹಾವಳಿಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನೆಲಸಮವಾದ ಮನೆಗಳ ವೀಕ್ಷಣೆ ನಡೆಸಿದ ಸಚಿವರು, ಪರಿಹಾರ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಪಾಟೀಲ ಮಾಳದಲ್ಲಿ ನೆಲಸಮವಾಗಿರುವ ಮನೆಗಳ ಬಗ್ಗೆ ಮಾಹಿತಿ ನೀಡಿದ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ನಗರದ ಬಹುತೇಕ ಕಡೆ ದೊಡ್ಡ ದೊಡ್ಡ ನಾಲಾಗಳಿಂದ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೆಲವು ಕಡೆ ನಾಲಾಗಳ ಅತಿಕ್ರಮಣದಿಂದಾಗಿ ಸಹ ಈ ರೀತಿಯ ಅನಾಹುತಗಳು ಆಗಿವೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಮೂರು ತಿಂಗಳು ಒಳ್ಳೆಯ ಸಮಯ. ಕಾರಣ ಕೂಡಲೇ ನಗರದಲ್ಲಿನ ರಾಜಕಾಲುವೆಗಳ ಸ್ವತ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಮಹಾನಗರಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಬೀಳುವ ಹಂತದಲ್ಲಿರುವ ಮನೆಗಳ ಸಮೀಕ್ಷೆ ತಕ್ಷಣ ಕೈಗೊಂಡು ಸರಿಯಾದ ಮಾರ್ಗೊಪಾಯ ಮಾಡಬೇಕು. ಸಂತ್ರಸ್ತರು ಮನೆ ನಿರ್ಮಾಣಕ್ಕೆ ಮುಂದೆ ಬಂದರೆ ಅವರಿಗೂ ತಕ್ಷಣ ಐದು ಲಕ್ಷ ಪರಿಹಾರ ನೀಡುವಂತೆ ಸಚಿವರು ಸೂಚನೆ ನೀಡಿದರು. ಬಸವನಕುಡಚಿಯಲ್ಲಿರುವ ಕೆಎಚ್‌ಬಿ ಕಾಲನಿಯಲ್ಲಿ ಮೂಲ ಸೌಲಭ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಈ ಸಮಸ್ಯೆಗಳಿಗೆ ಪರಿಹಾರ ನೀಡಿ ನಂತರ ಇದನ್ನು ಪಾಲಿಕೆಗೆ ಹಸ್ತಾಂತರ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ರಾಜ್ಯದಲ್ಲಿ ಈ ರೀತಿ ಶೇ. 40 ಕ್ಕೂ ಅಧಿಕ ಬಡಾವಣೆಗಳು ಹಸ್ತಾಂತರದ ಸಮಸ್ಯೆ ಎದುರಿಸುತ್ತಿವೆ. ಇದಕ್ಕೆ ಹಂತ ಹಂತವಾಗಿ ಮುಕ್ತಿ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರ ಅಹವಾಲು ಆಲಿಸಿದ ಸಚಿವ ಸೋಮಣ್ಣ ಪಾಟೀಲ ಮಾಳದಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಸಂತ್ರಸ್ತರಿಗೆ ಮನೆ ಕಟ್ಟುವ ಕಾರ್ಯಾದೇಶ ಪತ್ರವನ್ನು ವಿತರಿಸಿದರು. ವಿಧಾನಪರಿಷತ್‌ ಸರ್ಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ್‌, ಅನಿಲ ಬೆನಕೆ, ಜಿಲ್ಲಾಧಿಕಾರಿ ಎಸ್‌ಬಿ ಬೊಮ್ಮನಹಳ್ಳಿ, ಜಿ.ಪಂ.ಸಿಇಒ ಡಾ.ರಾಜೇಂದ್ರ ಕೆ.ವಿ.  ಪಾಲಿಕೆ ಆಯುಕ್ತ ಜಗದೀಶ ಉಪಸ್ಥಿತರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next