ನವದೆಹಲಿ:ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಇತ್ತೀಚೆಗೆ ನೀಡಿದ್ದ ವಿವಾದಿತ ಹೇಳಿಕೆ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಬುಧವಾರ ಕಲಾಪ ಆರಂಭವಾದಾಗ ವಿರೋಧ ಪಕ್ಷಗಳು ಹೆಗಡೆ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದವು.
ನಾವು ಸಂವಿಧಾನ ತಿದ್ದುಪಡಿ ಮಾಡಲು ಬಂದಿದ್ದೇವೆ, ಜಾತ್ಯತೀತ ಎಂಬ ಶಬ್ದದ ತಿದ್ದುಪಡಿಯಾಗಬೇಕು ಎಂದು ಇತ್ತೀಚೆಗೆ ಅನಂತ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು, ಇದು ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಏತನ್ಮಧ್ಯೆ ಅನಂತಕುಮಾರ್ ಹೆಗಡೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಕಿವಿಮಾತು ಹೇಳಿಸುವ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿತ್ತು.
ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂಬ ಹೇಳಿಕೆ ನೀಡಿರುವ ಕೇಂದ್ರ ಸಚಿವ ಹೆಗಡೆಯನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕೆಂದು ವಿಪಕ್ಷಗಳು ಕಲಾಪದಲ್ಲಿ ಆಗ್ರಹಿಸಿದವು, ಆದರೆ ಹೆಗಡೆ ಹೇಳಿಕೆಗೂ, ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ವಿಜಯ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಸಮಜಾಯಿಷಿ ನೀಡಿದ್ದಾರೆ.
ತೀವ್ರ ಗದ್ದಲದಿಂದಾಗಿ ಲೋಕಸಭೆ ಕಲಾಪವನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿಯೂ ವಿಪಕ್ಷಗಳು ಸಚಿವ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಹೆಗಡೆ ಅವಮಾನಿಸಿರುವುದಾಗಿ ವಿಪಕ್ಷಗಳು ವಾಗ್ದಾಳಿ ನಡೆಸಿದವು.
ಒಬ್ಬ ವ್ಯಕ್ತಿಯಾಗಿ ಸಂವಿಧಾನವನ್ನು ಒಪ್ಪಲು ಸಾಧ್ಯವಿಲ್ಲವೆಂದಾದರೆ, ಆ ವ್ಯಕ್ತಿಗೆ ಸಂಸತ್ ಸದಸ್ಯನಾಗಿ ಮುಂದುವರಿಯಲು ಯಾವುದೇ ಹಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದರು.