ಬೆಂಗಳೂರು: ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆಯಲ್ಲಿ ಜವಾಬ್ದಾರಿ ವಹಿಸಿರುವ ಉಸ್ತುವಾರಿ ಸಚಿವರು ಕಡ್ಡಾಯವಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಚುನಾವಣಾ ಉಸ್ತುವಾರಿ ಸಚಿವರು ಮತ್ತು ಇತರ ಮುಖಂಡರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ.
ಉಪ ಚುನಾವಣೆಯಲ್ಲಿ ಉಸ್ತುವಾರಿಯನ್ನಾಗಿ ನೇಮಿಸಿರುವ ಸಚಿವರ ಜತೆ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿರುವ ದಿನೇಶ್ ಗುಂಡೂರಾವ್ ತಮಗೆ ವಹಿಸಿರುವ ಜವಾಬ್ದಾರಿ ನಿಭಾಯಿಸುವಂತೆ ತಾಕೀತು ಮಾಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತದ ಉಸ್ತುವಾರಿಯಾಗಿ ಮೂವರು ಸಚಿವರು ಹಾಗೂ ಪ್ರತಿ ಜಿಲ್ಲಾ ಪಂಚಾಯಿತಿಗೂ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಆದರೆ, ಬಹುತೇಕ ಸಚಿವರು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದು, ತಮಗೂ, ಉಪ ಚುನಾವಣೆಗೂ ಸಂಬಂಧ ಇಲ್ಲದಂತೆ ನಡೆದುಕೊಂಡಿದ್ದರಿಂದ ಸಚಿವರ ಸಭೆ ಕರೆದು ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.
ಎರಡು ಕ್ಷೇತ್ರಗಳ ಉಪ ಚುನಾವಣೆ ಮೈತ್ರಿ ಸರ್ಕಾರಕ್ಕೆ ಮಹತ್ವದ್ದಾಗಿದ್ದು, ಎರಡೂ ಕ್ಷೇತ್ರಗಳ ಗೆಲುವು ಕಾಂಗ್ರೆಸ್‌ಗೆ ಮುಖ್ಯವಾಗಿದೆ. ಹೀಗಾಗಿ ಸಚಿವರು ತಮಗೆ ಸಂಬಂಧ ಇಲ್ಲದಂತೆ ದೂರ ಉಳಿಯುವುದರಿಂದ ಚುನಾವಣಾ ಫಲಿತಾಂಶದಲ್ಲಿ ವ್ಯತ್ಯಾಸವಾದರೆ, ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಗಂಭೀರವಾಗಿ ಕೆಲಸ ಮಾಡುವಂತೆ ಅಧ್ಯಕ್ಷರು ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ಚುನಾವಣೆಗೆ ಬೇಕಾದ ಅಗತ್ಯ ಸಂಪನ್ಮೂಲ ಕ್ರೋಢೀಕರಣದ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾ ಗಿದ್ದು, ಕೆಲವು ಸಚಿವರಿಗೆ ಸಂಪನ್ಮೂಲ ಕ್ರೋಢೀಕರಣದ ಜವಾಬ್ದಾರಿಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್, ಸಚಿವರಾದ ಆರ್.ವಿ.ದೇಶಪಾಂಡೆ, ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ಶಿವಶಂಕರ ರೆಡ್ಡಿ, ಎಂ.ಟಿ.ಬಿ. ನಾಗರಾಜ್, ಪಿ.ಟಿ. ಪರಮೇಶ್ವರ್ ನಾಯ್ಕ, ಇ. ತುಕಾರಾಂ ಪಾಲ್ಗೊಂಡಿದ್ದರು. ಡಿಸಿಎಂ ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್, ಯು.ಟಿ.ಖಾದರ್, ರಾಜಶೇಖರ ಪಾಟೀಲ್, ರಹೀಂ ಖಾನ್ ಸಭೆಗೆ ಹಾಜರಾಗಿರಲಿಲ್ಲ. ಈಗಾಗಲೇ ಕೆಲವು ಸಚಿವರು ಕ್ಷೇತ್ರಗಳಲ್ಲಿ ತಮಗೆ ವಹಿಸಿರುವ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಸಭೆಗೆ ಹಾಜರಾಗಿರಲಿಲ್ಲ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಸಭೆಯ ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ‘2 ಕ್ಷೇತ್ರಗಳಲ್ಲಿ ಉಪ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಸಚಿವರೊಂದಿಗೆ ಚರ್ಚೆ ನಡೆಸಿದ್ದೇವೆ. ಎಲ್ಲ ಸಚಿವರೂ ನಾಳೆಯಿಂದ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಯಾರಿಗೆ ಯಾವ ಜವಾಬ್ದಾರಿ ನೀಡಿದ್ದೇವೆಯೋ ಅವರು ತಮಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ’ ಎಂದರು.
ಇದೇ ಸಂದರ್ಭದಲ್ಲಿ ಸಿ.ಎಸ್. ಶಿವಳ್ಳಿ ಅವರನ್ನು ನೆನೆದು ಸಚಿವ ಡಿ.ಕೆ. ಶಿವಕುಮಾರ್ ಭಾವುಕರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವಳ್ಳಿ ಜತೆಗೆ ಡಿ.ಕೆ. ಶಿವಕುಮಾರ್ ಅವರ ಒಡನಾಟ ಚೆನ್ನಾಗಿತ್ತು. ಶಿವಳ್ಳಿಯವರು ಕಾಂಗ್ರೆಸ್‌ಗೆ ಬರಲು ಡಿ.ಕೆ.ಶಿವಕುಮಾರ್ ಕಾರಣರಾಗಿದ್ದರು. ಹೀಗಾಗಿ ಅವರನ್ನು ನೆನೆದು ಭಾವುಕರಾಗಿದ್ದಾರೆ ಎಂದು ಹೇಳಿದರು.