ಬೆಂಗಳೂರು: ಸಹಕಾರಿ ಸಂಘಗಳ ಅಧಿನಿಯ ಮಗಳಿಗೆ ಮತ್ತು ಕರ್ನಾಟಕ ಸಹಕಾರಿ ಸೌಹಾರ್ದ ಸಂಘಗಳ ಅಧಿನಿಯಮಗಳಿಗೆ ತಿದ್ದುಪಡಿ ತರುವ ಸಂಬಂಧ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ವಿಧಾನಸೌಧದಲ್ಲಿ ಶುಕ್ರವಾರ ಸಹಕಾರಿ ಕ್ಷೇತ್ರದ ಪ್ರಮುಖರ ಜತೆ ಸಮಾಲೋಚನೆ ನಡೆಸಿದರು.
ಸಹಕಾರಿ ಕ್ಷೇತ್ರದಲ್ಲಿನ ಚುನಾವಣಾ ಪದ್ದತಿಗಳಲ್ಲಿ ಕೆಲವು ಮಾರ್ಪಾಡು ಮಾಡುವುದು, ಸಹಕಾರಿ ಕ್ಷೇತ್ರದಲ್ಲಿ ಆಗಬೇಕಿರುವ ತಿದ್ದುಪಡಿಗಳು, ಮಾರ್ಚ್ 31ರೊಳಗೆ ಬರುವ ಸಹಕಾರಿ ಕ್ಷೇತ್ರದ ಎಲ್ಲಾ ಚುನಾವಣೆಗಳನ್ನು ಮೇ ತಿಂಗಳಿ ನವರೆಗೆ ಮುಂದೂಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಜತೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಾಥಮಿಕ ಸಹಕಾರಿ ಸಂಘಗಳ ಸದಸ್ಯತ್ವ ಮತ್ತು ಸಹ ಸದಸ್ಯತ್ವ ಪಡೆಯಲು ಕೆಲವು ಮಾರ್ಪಾಡುಗಳನ್ನು ಮಾಡುವ ಬಗ್ಗೆ ಚರ್ಚಿಸಲಾಯಿತು. ಸೌಹಾರ್ದ ಸಹಕಾರ ಸಂಘಗಳಿಗೆ ವಿಧಿಸಿರುವ ಆದಾಯ ತೆರಿಗೆ ವಿನಾಯಿತಿ ಸಂಬಂಧ ತಿದ್ದುಪಡಿಯೂ ಪ್ರಸ್ತಾಪವಾಯಿತು.
ಸಾಲ ವಸೂಲಾತಿ ಬಗ್ಗೆ ಕೆಲವು ಕಠಿಣ ನಿಯಮ ಜಾರಿಗೊಳಿಸಲು ತೀರ್ಮಾ ನಿಸಲಾಯಿತು. ಸಹಕಾರಿ ಕ್ಷೇತ್ರದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾಯಿತ ನಿರ್ದೇಶಕರ ಆಯ್ಕೆ ಮಾಡಬೇಕು. ನಾಮ ನಿರ್ದೇಶನ ಸದಸ್ಯರಿಗೆ ಅವಕಾಶ ಬೇಡ ಎಂಬ ಸಲಹೆಯೂ ಬಂತು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಶಿವರಾಮ ಹೆಬ್ಟಾರ್, ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಷಡಕ್ಷರಿ, ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಸೇರಿ ಹಲವು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.