ರಾಯಚೂರು: ಅ.1ರಿಂದ 20ನೇ ರಾಷ್ಟ್ರೀಯ ಜಾನುವಾರು ಗಣತಿ ಪ್ರಕ್ರಿಯೆ ಶುರುವಾಗಲಿದೆ. ಮೊದಲ ಬಾರಿಗೆ ಎಲ್ಲ ಮಾಹಿತಿಯನ್ನು ಟ್ಯಾಬ್ಲೆಟ್‌ಗಳಲ್ಲಿ ದಾಖಲಿಸಲಾಗುತ್ತಿದೆ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಖಾತೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಮೂರು ತಿಂಗಳು ಗಣತಿ ಕಾರ್ಯ ನಡೆಯಲಿದೆ. ಎಲ್ಲ ರೀತಿಯ ಸಾಕು ಪ್ರಾಣಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ದೇಶಾದ್ಯಂತ ಗಣತಿ ಕಾರ್ಯ ನಡೆಯಲಿದ್ದು, 30,227 ಗ್ರಾಮಗಳು, 623 ವಾರ್ಡ್‌ಗಳ 1.5 ಕೋಟಿ ಕುಟುಂಬಗಳಲ್ಲಿ ಗಣತಿ ನಡೆಸಲಾಗುವುದು.
ಕಳೆದ ಐದು ವರ್ಷಗಳ ಹಿಂದೆ ನಡೆಸಿದ ಸರ್ವೇಯಲ್ಲಿ ಜಾನುವಾರುಗಳ ಸಂಖ್ಯೆ ಇಳಿಮುಖವಾಗಿರುವುದು ಗಮನಕ್ಕೆ ಬಂದಿದೆ. ಯಾವ ರೈತರು ಕುರಿ, ಕೋಳಿ ಸಾಕಣೆ, ಮೀನುಗಾರಿಕೆಯಂಥ ಉಪಕಸುಬು ಮಾಡಿದ್ದಾರೋ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬ ವಿಚಾರ ಗೊತ್ತಾಗಿದೆ.ಹೀಗಾಗಿ ಆ ದಿಸೆಯಲ್ಲಿ ಸರ್ಕಾರ ಉಪಕಸುಬುಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದರು.
ಗಣತಿಯಲ್ಲಿ ಎಷ್ಟು ಮನೆಯಲ್ಲಿ, ಯಾವ ರೀತಿಯ ಎಷ್ಟು ಜಾನುವಾರುಗಳಿವೆ? ಕುರಿ, ಕೋಳಿ, ಹಂದಿ ಸೇರಿ ಯಾವೆಲ್ಲ ಪ್ರಾಣಿ ಸಾಕಲಾಗಿದೆ? ಅದರ ಜತೆಗೆ ಹಾಲು ಕರೆಯುವ ಯಂತ್ರ, ಹೊರೆ ಕಟ್ಟುವ ಯಂತ್ರ, ಮೇವು ಕಟಾವು ಯಂತ್ರ ಹೀಗೆ ಯಾವೆಲ್ಲ ಯಂತ್ರಗಳು ಬಳಕೆಯಾಗುತ್ತಿವೆ ಎಂಬಿತ್ಯಾದಿ ಮಾಹಿತಿ ಪಡೆಯಲಾಗುವುದು. ಅದರ ಜತೆಗೆ ಮಾಲೀಕರ ವಿವರ, ಸಾಮಾಜಿಕ ಸ್ಥಿತಿಗತಿ, ಜಾನುವಾರು ಹೊಂದಿರುವ, ಹೊಂದದಿರುವ ಕುಟುಂಬಗಳ ವಿವರ ದಾಖಲಿಸಲಾಗುವುದು ಎಂದರು.
ಪಶುಭಾಗ್ಯ ಯೋಜನೆ ಸರ್ವೇ ಆಗಿದ್ದು, ನಿರೀಕ್ಷೆಯಷ್ಟು ಅನುದಾನ ಬಂದಿಲ್ಲ. ಹೀಗಾಗಿ ಅದನ್ನು ತಡೆ ಹಿಡಿದಿದ್ದು, ಮುಖ್ಯಮಂತ್ರಿ ಜತೆ ಸಮಾಲೋಚಿಸಿ ಅದನ್ನು ಹೆಚ್ಚು ಮಾಡಿಸುವ ಪ್ರಯತ್ನಿಸಲಾಗುತ್ತಿದೆ. ಅದರ ಜತೆಗೆ ಎಸ್‌ಸಿ, ಎಸ್‌ಟಿ ಅನುದಾನ ಕೂಡ ಬರುತ್ತಿದೆ. ನರೇಗಾದಡಿ ದನದ ಕೊಟ್ಟಿಗೆ ನಿರ್ಮಿಸುವ ಕೆಲಸ ಕೈಗೊಳ್ಳಲು ಸೂಚಿಸಲಾಗಿದೆ. ಬಿಡಾಡಿ ದನಗಳ ಬಗ್ಗೆ ಆಯಾ ನಗರಸಭೆ, ಪಪಂ, ಪುರಸಭೆಗಳೇ ಕಾಳಜಿ ವಹಿಸಬೇಕು. ಗೋ ಶಾಲೆಗಳಿಗೆ ಸರ್ಕಾರ ಅನುದಾನದ ನೆರವು ನೀಡುತ್ತದೆ. ಅಂಥ ಜಾನುವಾರುಗಳನ್ನು ಅಲ್ಲಿ ಬಿಟ್ಟರೆ ಸರ್ಕಾರ ನಿಭಾಯಿಸಲಿದೆ. ಆದರೆ, ರಸ್ತೆಯಲ್ಲಿ ಬಿಟ್ಟರೆ ಸ್ಥಳೀಯ ಸಂಸ್ಥೆಗಳೇ ಕ್ರಮಕ್ಕೆ ಮುಂದಾಗಬೇಕು ಎಂದರು.
ಚಿಪ್‌ಗ್ಳ ಅಳವಡಿಕೆ: ರಾಜ್ಯದಲ್ಲಿ ಈಗಾಗಲೇ ಸುಮಾರು 50 ಲಕ್ಷ ಜಾನುವಾರುಗಳಿಗೆ ಚಿಪ್ ಅಳವಡಿಸಲಾಗಿದೆ. ಆ ಕಾರ್ಯ ಮುಂದುವರಿದಿದೆ. ಇದರಿಂದ ನಮಗೆ ಅಂಕಿ-ಅಂಶ ವಿವರ ಪಡೆಯಲು, ಮಾಲೀಕರ ಮಾಹಿತಿ ಪಡೆಯಲು ಅನುಕೂಲವಾಗುತ್ತಿದೆ. ಅದರ ಜತೆಗೆ ಬೇರೆ ಕಡೆಯಿಂದ ಬಂದ ಜಾನುವಾರುಗಳಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಅಂಥ ಜಾನುವಾರುಗಳಿಗೆ ಸುಲಭಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.
ಬರದ ಹಿನ್ನೆಲೆಯಲ್ಲಿ ಈಗಾಗಲೇ ಮೇವು ಸಂಗ್ರಹದ ಜತೆ ಮೇವಿನ ಕಿಟ್ ವಿತರಿಸಲಾಗುತ್ತಿದೆ. ಇಷ್ಟು ದಿನ ಮಳೆ ಇದ್ದ ಕಾರಣ ವಿತರಣೆ ಮಾಡಿರಲಿಲ್ಲ. ಡೀಸಿಗಳಿಂದ ಮಾಹಿತಿ ಪಡೆದಿದ್ದು ಅಗತ್ಯ ಬಿದ್ದರೆ ಗೋಶಾಲೆ ಆರಂಭಿಸಲಾಗುವುದು.
– ವೆಂಕಟರಾವ್ ನಾಡಗೌಡ, ಪಶುಸಂಗೋಪನೆ ಖಾತೆ ಸಚಿವ