ಶಿವಮೊಗ್ಗ: ಗೋವುಗಳನ್ನು ಕಡಿಯುವುದರಲ್ಲಿ ಸಾರ್ಥಕತೆ ಇಲ್ಲ. ಬದಲಿಗೆ ಅವುಗಳನ್ನು ಸಾಕುವುದರಲ್ಲಿ ಸಾರ್ಥಕತೆ ಇದೆ ಎಂದು ಮಾಜಿ ಗೃಹ ಸಚಿವ, ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು ಪಶು ಸಂಗೋಪನ ಇಲಾಖೆ ಸಚಿವ ವೆಂಕಟೇಶ್ ಅವರು ನಿನ್ನೆ ಆಡಿರುವ ಮಾತುಗಳು ಯಾರನ್ನು ಉದ್ದೇಶಿಸಿ ಹೇಳಿದ್ದು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ.ನಾವು ತಾಯಿಯ ಎದೆಹಾಲು ನಿಲ್ಲಿಸಿದ ಮೇಲೆಯೂ ಬದುಕಿರುವವರೆಗೂ ಹಸುವಿನ ಹಾಲನ್ನು ಕುಡಿಯುತ್ತೇವೆ. ಹೀಗಾಗಿಯೇ ಗೋವಿಗೆ ತಾಯಿ ಎಂದು ಕರೆಯುತ್ತೇವೆ ಎಂದರು.
ನಾವು ಆಹಾರ ಬೆಳೆ ಬೆಳೆಯಲು ವಿದೇಶಗಳಿಂದ ರಾಸಾಯನಿಕ ಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಪ್ರತಿವರ್ಷ ಐದು ಲಕ್ಷ ಕೋಟಿ ರೂಪಾಯಿ ವ್ಯಯಿಸುತ್ತಿದ್ದೇವೆ.ರಾಸಾಯನಿಕ ಗೊಬ್ಬರ ತಂದು ನಮ್ಮ ಮಣ್ಣನ್ನು ಸಾಯಿಸುತ್ತೇವೆ ಹೀಗಾಗಿ ನಮ್ಮ ರೈತ ಸಾಯುತ್ತಿದ್ದಾನೆ.ಇತ್ತೀಚೆಗೆ ನಾವು ಸಾವಯವ ಕೃಷಿಯತ್ತ ವಾಲುತ್ತಿದ್ದೇವೆ ಇದಕ್ಕಾಗಿ ಜಾನುವಾರುಗಳು ಬೇಕೇ ಬೇಕು. ಇಂದು ಜಾನುವಾರು ಗೊಬ್ಬರಕ್ಕೆ ಬೆಲೆ ಎಷ್ಟಾಗಿದೆ ಎಂಬುದನ್ನು ಎಲ್ಲರೂ ಯೋಚನೆ ಮಾಡಲೇಬೇಕು.ಪಶು ಸಂಗೋಪನ ಸಚಿವರು ಕಟುಕರ ರೀತಿ ಮಾತನಾಡುವುದು ಸರಿಯಲ್ಲ. ಮೊದಲು ಅದನ್ನು ನಿಲ್ಲಿಸಬೇಕು
ಪಶು ಸಂಗೋಪನಾ ಸಚಿವರು ಯಾರನ್ನು ತೃಪ್ತಿಪಡಿಸಬೇಕೆಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಇದು ತುಂಬಾ ದಿನ ನಡೆಯುವುದಿಲ್ಲ ಎಂದರು.