Advertisement

ಹುತಾತ್ಮ ಪೊಲೀಸ್ ಸಿಬ್ಬಂದಿಗಳ ಸ್ಮಾರಕ ಅಭಿವೃದ್ಧಿಗೆ ಸೂಕ್ತ ಕ್ರಮ: ಸುರೇಶ್ ಕುಮಾರ್ ಭರವಸೆ

08:00 PM Aug 14, 2020 | Hari Prasad |

ಹನೂರು (ಚಾಮರಾಜನಗರ): ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಾಣತೆತ್ತ ಸ್ಥಳದಲ್ಲಿ ನಿರ್ಮಿಸಲಾಗಿರುವ ಸ್ಮಾರಕವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

Advertisement

ತಾಲೂಕಿನ ಮಿಣ್ಯಂ ಸಮೀಪದ ಬೂದಿಕೆರೆ ರಸ್ತೆ ತಿರುವಿನಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಧೈರ್ಯ ಸಾಹಸ ಮೆರೆದು ವೀರ ಮರಣ ಹೊಂದಿದ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಸ್ಮರಣಾರ್ಥವಾಗಿ ನಿರ್ಮಿಸಿರುವ ಹುತಾತ್ಮರ ಸ್ಮಾರಕಕ್ಕೆ ಶುಕ್ರವಾರ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿ ಮಾತನಾಡಿದರು.

ಕಾಡುಗಳ್ಳ ವೀರಪ್ಪನ್ ಕಳೆದ ನಾಲ್ಕೈದು ದಶಕದ ಹಿಂದೆ ಪೋಲಿಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದ್ದನು. ಈ ದಿಸೆಯಲ್ಲಿ ವೀರಪ್ಪನ್ ಹಿಡಿಯಲು ಪೋಲಿಸ್ ಇಲಾಖೆ ಮುಂದಾಗಿತ್ತು. ಈ ಹಿನ್ನಲೆ 1992, ಆಗಸ್ಟ್ 14ರಂದು ಅಂದಿನ ಮೈಸೂರು ಎಸ್ಪಿ ಟಿ. ಹರಿಕೃಷ್ಣ, ಪಿಎಸೈ ಶಕೀಲ್ ಆಹಮದ್ ತಂಡ ಮಿಣ್ಯಂ ಸಮೀಪದ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ಇರುವುದನ್ನು ಖಚಿತಪಡಿಸಿಕೊಂಡು ಆತನ ಬಂಧನಕ್ಕಾಗಿ ಬಲೆ ಬೀಸಿದ್ದರು. ಆದರೆ ಈ ವೇಳೆ ಒಳಸಂಚು ನಡೆಸಿ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹತ್ಯೆ ಮಾಡಲಾಯಿತು. ಇದು ಶೋಕದ ವಿಚಾರ, ಈ ದಿಸೆಯಲ್ಲಿ ಹುತಾತ್ಮರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ ಎಂದು ತಿಳಿಸಲಾಯಿತು.

ಬಳಿಕ ಕೊಪ್ಪ ಗ್ರಾಮದ ಬಳಿಯ ಅರಣ್ಯ ಇಲಾಖೆಯ ನರ್ಸರಿಗೆ ತೆರಳಿದ ಅವರು ಸಸಿ ನೆಟ್ಟರು. ಈ ಸಂದರ್ಭದಲ್ಲಿ ಶಾಸಕ ಆರ್. ನರೇಂದ್ರ, ಜಿಪಂ ಸದಸ್ಯ ಬಸವರಾಜು, ಎಡಿಎಸ್ಪಿ ಅನಿತಾ ಹದ್ದಣನವರ್, ಎಸಿ ನಿಖಿತಾ ಚಿನ್ನಸ್ವಾಮಿ, ತಹಸೀಲ್ದಾರ್ ಕುನಾಲ್, ಡಿಎಫ್‌ಒ ಏಡುಕುಂಡಲು, ಬಿಇಒ ಟಿ.ಆರ್ ಸ್ವಾಮಿ ಹಾಗೂ ಇನ್ನಿತರರು ಹಾಜರಿದ್ದರು.

ಅಂದಿನ ಆ ಕಹಿ ಘಟನೆಯ ನೆನಪು
ವೀರಪ್ಪನ್‌ನನ್ನು ಸೆರೆ ಹಿಡಿಯಲು ಪೊಲೀಸರು ಸಿವಿಲ್ ಉಡುಪಿನಲ್ಲಿ ಅಂದಿನ ಕೊಳ್ಳೇಗಾಲ ಸರ್ಕಲ್ ಇನ್‌ಸ್ಪೆಕ್ಟರ್ ಮಂದಪ್ಪ, ಗ್ರಾಮಾಂತರ ಪೋಲಿಸ್ ಠಾಣೆಯ ಹನುಮಂತಪ್ಪ, ಕಮ್ಯಾಂಡೋ ಸಿಬ್ಬಂದಿಗಳನ್ನು ರಾಮಾಪುರದಿಂದ ಲಾರಿಯಲ್ಲಿ ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಪೋಲಿಸ್ ಸೂಪರಿಡೆಂಟ್ ಟಿ. ಹರಿಕೃಷ್ಣ ಅವರು ಮಲೆ ಮಹದೇಶ್ವರ ಬೆಟ್ಟದ ಪಿಎಸ್‌ಐ ಶಕೀಲ್ ಆಹಮ್ಮದ್ ಹಾಗೂ ಸಿಬ್ಬಂದಿಗಳನ್ನು ತಮ್ಮ ಜತೆ ಕರೆದುಕೊಂಡು ಹೋಗಿದ್ದರು.

Advertisement

ಈ ವೇಳೆ ಲಾರಿಯಲ್ಲಿದ್ದವರಿಗೆ ನನ್ನ ಕಾರಿನ ಹಿಂದೆ ಬರಬೇಕು ಎಂದು ಸೂಚನೆಯನ್ನು ಕೊಡಲಾಗಿತ್ತು. ಆದರೆ ರಾಮಾಪುರ ಬಿಟ್ಟು ಕಾರು ಹಾಗೂ ಲಾರಿ ಸುಮಾರು 25 ಕಿ.ಮೀ ದೂರ ಹೋದ ನಂತರ ಬೂದಿಕೆರೆ ರಸ್ತೆ ತಿರುವಿನ ಬಳಿ ಕುಖ್ಯಾತ ಹಂತಕನಾಗಿದ್ದದ ವೀರಪ್ಪನ್ ಹಾಗೂ 10 ರಿಂದ 15 ಜನರಿದ್ದ ಆತನ ಸಹಚರರು ವಾಹನ ಮುಂದೆ ಸಾಗದಂತೆ ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ಮರೆಯಾಗಿ ದಾಳಿಗೆ ಹೊಂಚು ಹಾಕಿದ್ದರು.

ಮಫ್ತಿಯಲ್ಲಿದ್ದ ಪೊಲೀಸರು ಬರುತ್ತಿದ್ದಂತೆಯೇ ಹೊಂಚು ಹಾಕಿ ಕುಳಿತಿದ್ದ ವೀರಪ್ಪನ್ ನೇತೃತ್ವದ ತಂಡ ಕಾರು ಹಾಗೂ ಲಾರಿಯ ಮೇಲೆ ಕೈ ಬಾಂಬು ಹಾಗೂ ಬಂದೂಕಿನಿಂದ ಯದ್ವಾತದ್ವ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಕಾರು ಹಾಗೂ ಲಾರಿಯಲ್ಲಿದ್ದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿ ದಾಳಿ ನಡೆಸಿದ್ದರು.

ಸುಮಾರು ಎರಡು ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಈ ಮಾರ್ಗವಾಗಿ ಸಿಎಂಎಫ್ ಎಂಬ ಖಾಸಗಿ ಬಸ್ ಬಂದಿದ್ದರಿಂದ ವೀರಪ್ಪನ್ ಹಾಗೂ ಕಾಡುಗಳ್ಳರ ತಂಡ ಕಾಡಿನೊಳಗೆ ಪರಾರಿಯಾದರು.

ಕಾಡುಗಳ್ಳರ ವೀರುದ್ಧ ವೀರಾವೇಶದಿಂದ ಹೋರಾಡುತ್ತ ಮೈಸೂರಿನ ಎಸ್‌ಪಿ ಟಿ. ಹರಿಕೃಷ್ಣ, ಪಿಎಸ್‌ಐ ಎಸ್.ಬಿ. ಬೆನೆಗೊಂಡ, ಎಪಿಸಿ ಸುಂದರ, ಕೆಎಸ್‌ಆರ್‌ಪಿಯ ಅಪ್ಪಚ್ಚು, ಕಾಳಪ್ಪ ಇವರುಗಳು ವೀರ ಮರಣವನ್ನು ಹೊಂದಿದ್ದರು. ಇದರ ನೆನಪಾರ್ಥವಾಗಿ ಸ್ಮಾರಕ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next