ಬೆಳಗಾವಿ: ಶ್ಯಾಮ್ ಪ್ರಸಾದ ಮುಖರ್ಜಿ ರುರ್ಬನ್ ಅಭಿಯಾನದಡಿ ಆಯ್ಕೆಯಾದ ಜಿಲ್ಲೆಯ ನಾಲ್ಕು ಗ್ರಾಮಗಳಿಗೆ ರಸ್ತೆ , ಕುಡಿಯುವ ನೀರು, ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ಶ್ಯಾಮ್ ಪ್ರಸಾದ ಮುಖರ್ಜಿ ರುರ್ಬನ್ ಅಭಿಯಾನದಲ್ಲಿ ಆಯ್ಕೆಯಾದ ಆಯ್ದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವಿಶೇಷ ಅನುದಾನ ನೀಡುವ ಕುರಿತು ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಹಳ್ಳಿಯ ವಾತಾವರಣ ಉಳಿಸಿ, ಗ್ರಾಮಸ್ಥರ ಜೀವನೋಪಾಯ ಮಟ್ಟ ಹೆಚ್ಚಿಸುವ ಶ್ಯಾಮ್ ಪ್ರಸಾದ ಮುಖರ್ಜಿ ರುರ್ಬನ್ ಅಭಿಯಾನದಡಿ ಜಿಲ್ಲೆಯ ನಾಲ್ಕು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಬೇಗ ಮುಗಿಸಬೇಕು.
ಜಿಲ್ಲೆಯ ಕಂಗ್ರಾಳಿ ಬಿ.ಕೆ., ಕಂಗ್ರಾಳಿ ಕೆ.ಎಚ್., ಮಂಡೋಳಿ ಹಾಗೂ ಅಂಬೇವಾಡಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಗ್ರಾಮಗಳಲ್ಲಿ ಅಗತ್ಯ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು.
ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಿಗದಿತ ವೇಳೆಯಲ್ಲಿ ಅಧಿಕಾರಿಗಳು ಮುಗಿಸಬೇಕು. ಈ ಯೋಜನೆ ಸಾರ್ಥಕವಾದರೆ ಮುಂದೆ ಮತ್ತೆ ಬೇರೆ-ಬೇರೆ ಗ್ರಾಮಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಿದಾಗ ಅನುಕೂಲ ಆಗುತ್ತದೆ. ಅಧಿಕಾರಿಗಳು ಆಸಕ್ತಿ ವಹಿಸಿ ವೈಜ್ಞಾನಿಕವಾಗಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.
ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಶ್ಯಾಮ್ ಪ್ರಸಾದ್ ಮುಖರ್ಜಿ ರುರ್ಬನ್ ಅಭಿಯಾನದಡಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಸರಿಯಾದ ಕ್ರಮದಲ್ಲಿ
ನಡೆಯಬೇಕು. ಸೋಲಾರ್ ಬೀದಿ ದೀಪಗಳು ಕೆಲಸ ಮಾಡದಿದ್ದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೀದಿ ದೀಪಗಳನ್ನು ಹಾಕುವಾಗ ನಿರ್ಲಕ್ಷ್ಯ ತೋರುತ್ತಿರುವ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ, ಗ್ರಾಪಂ ಸದಸ್ಯರು, ಅಧಿಕಾರಿಗಳು ಇದ್ದರು.