ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಮತರಾಜಕಾರಣಕ್ಕಾಗಿ ಇಂಥ ಹೇಳಿಕೆ ನೀಡಿರುವುದು ಖಂಡನೀಯ. ಈ ರೀತಿ ಸುತ್ತಿ ಬಳಸಿ ಮಾತನಾಡುವ ಬದಲು ಉಗ್ರ ಕೃತ್ಯ ಎಸಗುವವರನ್ನೆಲ್ಲ “ದೇ ಆರ್ ಮೈ ಬ್ರದರ್ಸ್ ” ಎಂದು ಹೇಳಿಬಿಡಿ ಎಂದು ಟೀಕಿಸಿದ್ದಾರೆ.
ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಟ್ವೀಟ್ ಬಗ್ಗೆಯೂ ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಎನ್ ಐಎ ತನಿಖೆ ಬಗ್ಗೆ ಗುಮಾನಿಯ ಮಾತನಾಡಿದ್ದಾರೆ. ಹಾಗಾದರೆ ಸ್ಫೋಟ ಪ್ರಕರಣದ ತನಿಖೆಯನ್ನು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಮೂಲಕ ಮಾಡಿಸಬೇಕೆ ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಡಿಜೆಹಳ್ಳಿ, ಕೆಜೆಹಳ್ಳಿ ಘಟನೆ ನಡೆದಾಗಲೂ ಶಿವಕುಮಾರ್ ಇದೇ ರೀತಿ ಮಾತನಾಡಿದ್ದರು. ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳನ್ನು ನನ್ನ ಸೋದರರು ಎಂದು ಕರೆದುಕೊಂಡಿದ್ದರು. ಈಗ ಮಂಗಳೂರು ಬ್ಲಾಸ್ಟ್ ಪ್ರಕರಣದ ಆರೋಪಿಗಳ ಬಗ್ಗೆಯೂ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಉಗ್ರರೆಲ್ಲ ನಿಮ್ಮ ಬಂಧುಗಳಾಗುತ್ತಾರೆಯೇ ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪಣಜಿ: ಡಿಸೆಂಬರ್ ಅಂತ್ಯದೊಳಗೆ ಕೇಬಲ್ ಸೇತುವೆ ನಾಗರಿಕರ ಪ್ರಯಾಣಕ್ಕೆ ಮುಕ್ತ