ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ತಂದೆ ಪಿ.ಎನ್.ಕೇಶವರೆಡ್ಡಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದನ್ನು ಸ್ವತಃ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಹಲವು ದಿನಗಳಿಂದ ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಕೇಶವರೆಡ್ಡಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸೋಮವಾರ ಕೋವಿಡ್-19 ಟೆಸ್ಟ್‌ಗೆ ಒಳಗಾಗಿದ್ದು, ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಹಲವು ದಿನಗಳ ಹಿಂದೆ ಸಚಿವ ಸುಧಾಕರ್ ನಿವಾಸದಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಯೊಬ್ಬರಿಗೆ ಕೋವಿಡ್ -19 ದೃಢಪಟ್ಟ ಹಿನ್ನೆಲೆಯಲ್ಲಿ ಕೇಶವರೆಡ್ಡಿ ಸೇರಿದಂತೆ ಸುಧಾಕರ್ ಪತ್ನಿ ಹಾಗೂ ಮಕ್ಕಳನ್ನು ಕೋವಿಡ್-19 ಪರೀಕ್ಷೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೋಮವಾರ ದಾಖಲು ಮಾಡಲಾಗಿತ್ತು.
ಕುಟುಂಬಸ್ಥರ ವರದಿ ಬಾಕಿ: ಮಧ್ಯಾಹ್ನ ತಂದೆಯ ಆರೋಗ್ಯದ ಬಗ್ಗೆ ಟ್ವಿಟ್ ಮಾಡಿದ್ದ ಡಾ.ಕೆ.ಸುಧಾಕರ್, ಕೆಮ್ಮು, ಜ್ವರದಿಂದ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ 82 ವರ್ಷದ ನನ್ನ ತಂದೆಯವರು ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಪರೀಕ್ಷೆಗೂ ಒಳಗಾಗಿದ್ದಾರೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದರು. ಸಂಜೆ 06.22ಕ್ಕೆ ಮತ್ತೆ ಟ್ವೀಟ್ ಮಾಡಿ ತಂದೆಯವರ ಕೋವಿಡ್ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.
ಮೂಲತಃ ಶಿಕ್ಷಕರು: 82 ವರ್ಷದ ಪಿ.ಎನ್.ಕೇಶವರೆಡ್ಡಿ, ಚಿಕ್ಕಬಳ್ಳಾಪುರ ತಾ.ಪೆರೇಸಂದ್ರ ಗ್ರಾಮದವರು. ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅವರು, ಮೂಲತಃ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು. ನಿವೃತ್ತಿ ಬಳಿಕ ಕ್ಷೇತ್ರದ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2015 ಸಾಲಿನಲ್ಲಿ ನಡೆದ ಜಿಪಂ ಚುನಾವಣೆಯಲ್ಲಿ ಮಂಡಿಕಲ್ ಜಿಪಂ ಸದಸ್ಯರಾಗಿ ಆಯ್ಕೆಗೊಂಡು ಕಾಂಗ್ರೆಸ್ ನಿಂದ ಜಿಪಂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಎರಡೂವರೆ ವರ್ಷದ ಬಳಿಕ ಸ್ವಪಕ್ಷೀಯ ಸದಸ್ಯರ ಬಂಡಾಯಕ್ಕೆ ಮಣಿದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಜಿಪಂ ಸದಸ್ಯರಾಗಿ ಮುಂದುವರೆ ದಿ ದ್ದಾರೆ. ವಾರದ ಹಿಂದೆ ಸ್ವಗ್ರಾಮ ಪೆರೇಸಂದ್ರಕ್ಕೆ ಆಗಮಿಸಿದ್ದ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಬೆಂಗಳೂರಿನ ನಿವಾಸಕ್ಕೆ ವಾಪಸ್ಸು ಆಗಿದ್ದರು.