Advertisement

‘ಕೊರೊನಾ ಕರ್ಫ್ಯೂ’ ಅಪಹಾಸ್ಯ ಮಾಡಿದವರಿಗೆ ತಿರುಗೇಟು ನೀಡಿದ ಸಚಿವ ಕೆ.ಸುಧಾಕರ್

09:16 PM Apr 09, 2021 | Team Udayavani |

ಬೆಂಗಳೂರು : ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪರೀಕ್ಷೆ ಹೆಚ್ಚಳ,ಸಮರ್ಪಕ ಸಂಪರ್ಕ ಪತ್ತೆ, ಸೋಂಕಿತರ ಚಿಕಿತ್ಸೆಗೆ ಆಂಬ್ಯುಲೆನ್ಸ್, ಹಾಸಿಗೆಗಳ ವ್ಯವಸ್ಥೆ ಹೀಗೆ ಹಲವು ರೀತಿಯ ಸಿದ್ಧತೆಗಳಲ್ಲಿ ಅಧಿಕಾರಿಗಳು,ಕೋವಿಡ್ ಯೋಧರು ನಿರಂತರ ಶ್ರಮಿಸುತ್ತಿದ್ದಾರೆ ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

Advertisement

ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಇಂತಹ ಸಂದರ್ಭದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಕೊರೊನಾ ಕರ್ಫ್ಯೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಈ ಕುರಿತು ಕೆಲವರು ಅಪಹಾಸ್ಯ, ಟೀಕೆ-ಟಿಪ್ಪಣಿಗಳು ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಮೊದಲನೇ ಅಲೆ ಕಡಿಮೆಯಾದ ನಂತರ ಕೊಂಚ ನಿರ್ಲಕ್ಷ್ಯ ತೋರುತ್ತಿರುವ ಜನರಲ್ಲಿ ಮತ್ತೊಮ್ಮೆ ಜಾಗೃತಿ ಮೂಡಿಸಬೇಕಿದೆ ಎಂದಿದ್ದಾರೆ.

ಈ ಬಾರಿ ಲಸಿಕೆ ಕೂಡ ಲಭ್ಯವಿರುವುದರಿಂದ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ವಿತರಿಸುವುದು, ಲಸಿಕೆ ಬಗ್ಗೆ ಇರುವ ಅಂಜಿಕೆ, ತಪ್ಪು ತಿಳುವಳಿಕೆಗಳ ನಿವಾರಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ವಿಪಕ್ಷಗಳಿಗೆ ಮೊಸರಿನಲ್ಲಿ ಕಲ್ಲು ಹುಡುಕುವುದು, ಕಂಡೋರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡುವುದೇ ಕೆಲಸವಾಗಿದೆ.

ಅನ್ಯ ಪಕ್ಷಗಳ ನಾಯಕರೂ ಜನರಿಂದ ಆರಿಸಿ ಬಂದಂತಹ ಜನಪ್ರತಿನಿಧಿಗಳೇ. ಸರ್ಕಾರಕ್ಕೆ ರಚನಾತ್ಮಕ ಸಲಹೆ ಸೂಚನೆ ನೀಡುವುದಕ್ಕೆ ಅವರಿಗೆ ಅವಕಾಶವೂ ಇದೆ, ಅದು ಅವರ ಕರ್ತವ್ಯವೂ ಹೌದು. ಅದು ಬಿಟ್ಟು ‘ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ’ ಎಂಬಂತೆ ಕೇವಲ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ, ಅದು ಅವರಿಗೆ ಶೋಭೆ ತರುವುದೂ ಇಲ್ಲ.

ಪಕ್ಷಾತೀತವಾಗಿ ಎಲ್ಲ ನಾಯಕರು, ಜನಪ್ರತಿನಿಧಿಗಳು ಒಗ್ಗಟ್ಟಾಗಿ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಪ್ರಯತ್ನಿಸಿದರೆ, ಜನರಲ್ಲಿ ಎರಡನೇ ಅಲೆ ಬಗ್ಗೆ ಜಾಗೃತಿ ಮೂಡಿಸಿದರೆ, ರಾಜ್ಯವನ್ನು ಆದಷ್ಟು ಬೇಗ ಕೊರೊನಾ ಮುಕ್ತವನ್ನಾಗಿ ಮಾಡಿ, ಜನರ ಜೀವ ಮತ್ತು ಜೀವನೋಪಾಯ ಎರಡನ್ನೂ ಉಳಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next