ಬೆಂಗಳೂರು: ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಶುಕ್ರವಾರ ರಾತ್ರಿ ದಿಢೀರ್ ಭೇಟಿ ನೀಡಿದರು.
ಬಳಿಕ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರನ್ನು ಸಚಿವರು ತರಾಟೆ ತೆಗೆದುಕೊಂಡಿದ್ದಾರೆ.
ಇಂದು ರಾತ್ರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವರು, ವೈದ್ಯರು, ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ, ಚಿಕಿತ್ಸೆ, ಶುಚಿತ್ವ ಹಾಗೂ ಮಾರ್ಗಸೂಚಿ ಪಾಲನೆ ಕುರಿತು ಪರಿಶೀಲನೆ ನಡೆಸಿದರು.
ಕೋವಿಡ್ ಕೆಲಸದಲ್ಲಿ ನಿರತರಾದವರಿಗೆ ನೀಡಿರುವ ಉಪಕರಣಗಳ ಪರಿಶೀಲನೆ ನಡೆಸಿದರು. ಪಿಪಿಇ ಕಿಟ್, ಆಸ್ಪತ್ರೆಯಲ್ಲಿ ಇರುವ ದಾಸ್ತಾನು ವಿವರಗಳನ್ನೂ ಸಹ ಸಚಿವ ಸುಧಾಕರ್ ಇದೇ ಸಂದರ್ಭದಲ್ಲಿ ಪರಿಶೀಲನೆ ನಡೆಸಿದರು.
ಗುರುವಾರ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಘಟನೆ ನಡೆದ ಕುರಿತು ಸಚಿವರು ಸಂಬಂಧಪಟ್ಟವರ ಬಳಿಯಿಂದ ಮಾಹಿತಿ ಪಡೆದರು.
35 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಕೋವಿಡ್ 19 ಪಾಸಿಟಿವ್ ಆಗಿರುವುದಕ್ಕೆ ಅಧೀಕ್ಷಕರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿಗೆ ರಕ್ಷಣೆ ಕೊಡಲು ವಿಫಲರಾಗಿರುವ ನೀವು ರೋಗಿಗಳನ್ನು ಹೇಗೆ ನೋಡಿಕೊಳ್ಳುತ್ತಿದ್ದೀರಿ ಎಂದು ಸಚಿವರು ಪ್ರಶ್ನಿಸಿದರು.