ರಾಯಚೂರು: ಆರೋಗ್ಯ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀ ರಾಮುಲು ಅವರು ಕೈಗೊಂಡ ಸಭೆಯಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಪಾಲ್ಗೊಳ್ಳುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ ಘಟನೆ ರವಿವಾರ ನಡೆದಿದೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕೋವಿಡ್ 19 ಪರಿಶೀಲನಾ ಸಭೆಯಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಪಾಲ್ಗೊಂಡಿದ್ದರು.
ಶಾಸಕರಲ್ಲದವರು ಸಭೆಯ ವೇದಿಕೆಯಲ್ಲಿ ಆಸೀನರಾದರೂ ಯಾರು ಆಕ್ಷೇಪ ವ್ಯಕ್ತಪಡಿಸಲಿಲ್ಲ. ಸಾಮಾಜಿಕ ಅಂತರ ಕಾಪಾಡಲು ವೇದಿಕೆಯಲ್ಲಿ ಸ್ಥಳಾಭಾವ ಇತ್ತು. ಆದರೂ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಶಾಸಕರ ಜತೆಗೇ ವೇದಿಕೆ ಹಂಚಿಕೊಂಡಿದ್ದಾರೆ. ಉಸ್ತುವಾರಿ ಸಚಿವರು ಕೂಡ ಈ ಬಗ್ಗೆ ಮೌನ ವಹಿಸುವ ಮೂಲಕ ಶಿಷ್ಟಚಾರ ಉಲ್ಲಂಘನೆಗೆ ಅನುವು ಮಾಡಿಕೊಟ್ಟಂತಾಯಿತು.
ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಸಭೆಯಲ್ಲಿ ಪಾಲ್ಗೊಂಡಿದ್ದಲ್ಲದೇ ಮಾತನಾಡಿದರು. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.
ಇನ್ನೂ ಕೊಪ್ಪಳ ಸಂಸದ ಕರಡಿ ಸಂಗಣ್ಣ ಪಾಲ್ಗೊಂಡಿದ್ದರೆ ಜಿಲ್ಲೆಯ ಸಂಸದ ರಾಜಾ ಅಮರೇಶ್ವರ ನಾಯಕ ಸಭೆಗೆ ಗೈರಾಗಿದ್ದು ಕಂಡು ಬಂತು.