ಮಸ್ಕಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್‌ನ ನಾಯಕರ ನಾಲಿಗೆಗೆ ಲಂಗು-ಲಗಾಮು ಇಲ್ಲದಾಗಿದೆ. ಹೀಗಾಗಿ ಕಂತೆ-ಕಂತೆ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಮಸ್ಕಿ ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮಸ್ಕಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ನಾಯಕರು ಪ್ರತಾಪಗೌಡ ಪಾಟೀಲ್ ಬಾಂಬೆ, ಗೋವಾಗೆ ಹೋಗಿ ವ್ಯಾಪಾರ ಆಗಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಭಾಷೆಯನ್ನು ಬಳಸುವುದು ಎಷ್ಟು ಸೂಕ್ತ? ಸಮ್ಮಿಶ್ರ ಸರಕಾರದ ಭ್ರಷ್ಟಾಚಾರ, ದುರಾಳಿತಕ್ಕೆ ಬೇಸತ್ತು 17 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಅ ಧಿಕಾರದ ಸಮಯದಲ್ಲಿ ಪ್ರತಾಪಗೌಡ ಪಾಟೀಲ್ ಸೇರಿ 17 ಜನ ಶಾಸಕರು ಮುಖ್ಯಮಂತ್ರಿಗಳ ಮನೆ ಬಾಗಿಲು ಕಾದಿದ್ದರು. ಆದರೆ ಅವರ ಕ್ಷೇತ್ರಕ್ಕೆ ಬಿಡಿಗಾಸು ಹಣ ನೀಡಲಿಲ್ಲ. ಇದಕ್ಕೆ ಬೇಸತ್ತು ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಹೊರತು ಯಾವುದೇ ರೀತಿ ವ್ಯಾಪಾರ ಆಗಿಲ್ಲ. ಕಾಂಗ್ರೆಸ್‌ನ ನಾಯಕರು ಅಹಂಕಾರದಿಂದ ಮಾತನಾಡುತ್ತಿದ್ದಾರೆ. ಸುಳ್ಳುಗಳನ್ನು ಹೇಳಿ ಜನರನ್ನು ಯಾಮಾರಿಸುತ್ತಿದ್ದಾರೆ. ಆದರೆ ಜನರಿಗೆ ಸತ್ಯ ಯಾವುದು? ಸುಳ್ಳು ಯಾವುದು ಎಂದು ಗೊತ್ತಿದೆ. ಹೀಗಾಗಿ ಮಸ್ಕಿ ಬೈ ಎಲೆಕ್ಷನ್‌ನಲ್ಲಿ ಅವರಿಗೆ ಉತ್ತರ ಸಿಗಲಿದೆ ಎಂದು ಬಿ.ಶ್ರೀರಾಮುಲು ಹೇಳಿದರು.
ಅಪ್ಪನ ಪರ ಮಗ ಇದಾರೆ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅಪ್ಪನ ಹಿತಕ್ಕಾಗಿ ಮಗ ದುಡಿಯುವುದರಲ್ಲಿ ತಪ್ಪೇನಿದೆ? ಯಡಿಯೂರಪ್ಪನ ಸಿಎಂ ಮಾಡಿದವರನ್ನು ಶಾಸಕರನ್ನಾಗಿಸುವುದು ವಿಜಯೇಂದ್ರ ಅವರ ಕರ್ತವ್ಯ. ಇದಕ್ಕಾಗಿ ಅವರು ಉಪಚುನಾವಣೆ ಉಸ್ತುವಾರಿ ಹೊತ್ತಿದ್ದಾರೆ. ಆದರೆ ಅವರು ಬಂದಾಕ್ಷಣೆ ದುಡ್ಡು ಚಲ್ತಾರೆ ಎನ್ನುವುದು ಸಿದ್ದರಾಮಯ್ಯರ ಭ್ರಮೆಯಾಗಿದೆ. ಜನರ ಮನಸ್ಸು ಗೆದ್ದು ಚುನಾವಣೆ ಮಾಡ್ತೆವೆ. ಇದಕ್ಕೆ ಆರ್.ಆರ್.ನಗರ, ಶಿರ ವಿಧಾನ ಸಭೆ ಕ್ಷೇತ್ರಗಳೇ ಸಾಕ್ಷಿಯಾಗಿವೆ. ಇದೇ ಮಾದರಿಯಲ್ಲಿ ಮಸ್ಕಿಯಲ್ಲೂ ಗೆಲುವು ಸಿಗಲಿದೆ. ಮಸ್ಕಿ ಜನರು ಪ್ರತಾಪಗೌಡ ಅವರನ್ನ ಕೇವಲ ಶಾಸಕರನ್ನಾಗಿ ಮಾಡದೇ ಮಂತ್ರಿಯನ್ನಾಗಿ ಮಾಡುತ್ತಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಸುಳ್ಳುಗಾರ: ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ. ಕಾಂಗ್ರೆಸ್, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವ ಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಏಕೆ ಮೀಸಲಾತಿ ಕೊಡಲಿಲ್ಲ? ಮೀಸಲಾತಿಗಾಗಿ ಹಲವು ಸಮುದಾಯಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ. ಆಗ ಸಿದ್ದರಾಮಯ್ಯ ಏನು ನಿದ್ದೆ ಮಾಡುತ್ತಿದ್ದರೆ? ಇಂತಹ ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಈಗ ಬಿಜೆಪಿ ಮಾಡುತ್ತಿದೆ. ಮೀಸಲಾತಿ ಹೆಚ್ಚಳದ ಬಗ್ಗೆ ಎಲ್ಲ ಸಿದ್ಧತೆಗಳು ನಡೆದಿವೆ. ಕಾಂಗ್ರೆಸ್, ಜೆಡಿಎಸ್ ಸರಕಾರಗಳದ್ದು ರಾಯಚೂರಿಗೆ ಏನು ಕೊಡುಗೆ ಇಲ್ಲ. ಇಲ್ಲಿನ ಜನರು ಚಿನ್ನ, ಅನ್ನ, ವಿದ್ಯುತ್ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ನೀರಾವರಿಗಾಗಿ ನೂರಾರು ಕೋಟಿ ಬಿಡುಗಡೆ ಮಾಡಿದೆ. ತಾಂತ್ರಿಕ ದೋಷವಿರುವ 5ಎ ಕಾಲುವೆ ಯೋಜನೆಯನ್ನೂ ಪರಿಷ್ಕರಣೆ ಮಾಡಿ ಜಾರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ಮುಖಂಡ ಪ್ರಸನ್ನ ಪಾಟೀಲ್ ಸೇರಿ ಇತರರು ಇದ್ದರು.