ವಿಜಯನಗರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಕಾರು ಸವಾರರಿಗೆ ಸಹಾಯ ಹಸ್ತ ಚಾಚಿದ್ದು,ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಲು ತೆರಳುವ ವೇಳೆ ದಾರಿ ಮಧ್ಯ ತನ್ನ ಕಾರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಿಟ್ಟು ಕೊಟ್ಟ ಘಟನೆ ಶನಿವಾರ ನಡೆದಿದೆ.
ಹೊಸಪೇಟೆ ಗ್ರಾಮೀಣ ಭಾಗದ ಹೊರವಲಯದಲ್ಲಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಗಾಯಗೊಂಡಿದ್ದ ಸವಾರರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವೆ, ತಮ್ಮ ವಾಹನದ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಿದರು.
ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಿಂದ ರಸ್ತೆಯ ಮುಖಾಂತರ ತೆರಳುತ್ತಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು, ಅಪಘಾತಕ್ಕೀಡಾಗಿ ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ಸೇರಿಸಲು ತಮ್ಮ ವಾಹನವನ್ನು ನೀಡಿ, ಕಾರ್ಯಕಾರಿಣಿ ನಡೆಯುವ ಸ್ಥಳಕ್ಕೆ, ಸುಮಾರು 5 ಕಿ. ಮೀ ನಷ್ಟು ದೂರ ಬೈಕಿನ ಮೂಲಕ ತೆರಳಿ ಮಾನವೀಯತೆಯನ್ನು ಮೆರೆದಿದ್ದಾರೆ.
ಅಪಘಾತಕ್ಕೀಡಾದವರಿಗೆ ಸಹಾಯಹಸ್ತವನ್ನು ಚಾಚಿ, ಜನಸಾಮಾನ್ಯರಂತೆ ಬೈಕಿನಲ್ಲಿ ಸಮಾರಂಭದ ಸ್ಥಳಕ್ಕೆ ತೆರಳಿದ ಕೇಂದ್ರ ಸಚಿವರ ಈ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.