Advertisement

ಬಂಡಾಯ ನೆಲದ ನಾಯಕ ಮುನೇನಕೊಪ್ಪ

02:20 PM Aug 05, 2021 | Team Udayavani |

ಹುಬ್ಬಳ್ಳಿ: ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಉತ್ತಮ ಸಂಘಟಕ ಹಾಗೂ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ.

Advertisement

ವಿಶೇಷವಾಗಿ ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯಕ್ಕೆ ಒತ್ತು ನೀಡಿದವರು. ಮಳೆಗಾಲ ವೇಳೆ ಪ್ರವಾಹದಿಂದ ಸಾಕಷ್ಟು ಹಾನಿ ಉಂಟು ಮಾಡುವ, ಹಲವು ಗ್ರಾಮಗಳಿಗೆ ಸಂಕಷ್ಟ ತಂದೊಡ್ಡುವ ಬೆಣ್ಣೆಹಳ್ಳ-ತುಪ್ಪರಿಹಳ್ಳಗಳ ಪ್ರವಾಹ ತಡೆಗೆ ತಮ್ಮದೇ ಶ್ರಮ ಹಾಕಿದ್ದಾರೆ.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.

1969, ಜೂ.1ರಂದು ನವಲಗುಂದ ತಾಲೂಕಿನ ಅಮರಗೋಳದಲ್ಲಿ ಜನಿಸಿದ್ದು, ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಬಿಎ ಪದವಿ ಪಡೆದಿರುವ ಮುನೇನಕೊಪ್ಪ ಅವರು ರಾಜಕೀಯ ಪ್ರವೇಶಕ್ಕೂ ಮುನ್ನ ಕೃಷಿ-ವ್ಯವಹಾರದಲ್ಲಿ ತೊಡಗಿದ್ದರು. ತಂದೆ ಬಸನಗೌಡ ಪಾಟೀಲ ಮುನೇನಕೊಪ್ಪ ಕೂಡ ಕೃಷಿಕರು. ಶಂಕರ ಪಾಟೀಲ ಅವರಿಗೆ ಪತ್ನಿ ಪ್ರಭಾವತಿ, ನಾಗರಾಜ ಹಾಗೂ ರೋಹನ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ನವಲಗುಂದ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಶಂಕರ ಪಾಟೀಲ ಮುನೇನಕೊಪ್ಪ ಅವರು ಮೊದಲ ಯತ್ನದಲ್ಲೇ ಗೆಲುವಿನ ನಗೆ ಬೀರಿ ವಿಧಾನಸಭೆ ಪ್ರವೇಶ ಮಾಡಿದ್ದರು. 2008-2013ರ ಅವಧಿಯಲ್ಲಿ ಶಾಸಕರಾಗಿದ್ದಷ್ಟೇ ಅಲ್ಲದೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿದ್ದರು. 2018ರಲ್ಲಿ ಮತ್ತೂಮ್ಮೆ ನವಲಗುಂದ ಕ್ಷೇತ್ರದಿಂದ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದರು. 2019ರಲ್ಲಿ ಜೆಡಿಎಸ್‌ -ಕಾಂಗ್ರೆಸ್‌ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2020ರಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ರಾಜಕೀಯ ಜತೆಗೆ ಸಮಾಜದಲ್ಲೂ ತಮ್ಮದೇ ಪ್ರಭಾವ ಹೊಂದಿರುವ ಅವರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿಯೂ ನೇಮಕಗೊಂಡಿದ್ದಾರೆ.

Advertisement

ನವಲಗುಂದ ಕ್ಷೇತ್ರದಲ್ಲಿ ಏತ ನೀರಾವರಿ ಮೂಲಕ ಸುಮಾರು 10 ಸಾವಿರ ಎಕರೆಗೆ ಜಮೀನಿಗೆ ನೀರು ಪೂರೈಸುವ ಯೋಜನೆ ಕೈಗೊಂಡು ರೈತರ ಪ್ರೀತಿ ಪಡೆದವರು. ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟದಲ್ಲೂ ಪಾಲ್ಗೊಂಡವರಾಗಿದ್ದಾರೆ. ಬೆಣ್ಣೆಹಳ್ಳ- ತುಪ್ಪರಿಹಳ್ಳ ಪ್ರವಾಹ ತಡೆಗೆ ಶಾಶ್ವತ ಯೋಜನೆಗೆ ಸಾಕಷ್ಟು ಶ್ರಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next