ಕಾರವಾರ( ಹೆಗ್ಗಾರ): ನನ್ನ ಕುಲ ಮಾನವ ಕುಲ, ನಕ್ಷತ್ರ ಮಾನವ ನಕ್ಷತ್ರ ಎಂದು ಪೂಜೆಗೆ ಬಂದ ಪುರೋಹಿತರಿಗೆ ,ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿದ ಘಟನೆ ಶಿರಸಿ ತಾಲೂಕಿನ ಹೆಗ್ಗಾರ ಗ್ರಾಮದಲ್ಲಿ ನಡೆಯಿತು.
ಶಿರಸಿ ತಾಲೂಕಿನ ಶಿವಳ್ಳಿ ಪಂಚಾಯತ್ ಹೆಗ್ಗಾರ ಗ್ರಾಮದಲ್ಲಿ ನಿರ್ಮಿಸಿದ ಕಾಲು ಸಂಕ ಉದ್ಘಾಟಿಸಲು ಶನಿವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ , ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಭೀಮಣ್ಣ ನಾಯ್ಕ ಜೊತೆ ಆಗಮಿಸಿದ್ದರು.
ಕಾಲು ಸಂಕ ಉದ್ಘಾಟನೆಗೆ ಮುನ್ನ ಹೆಗ್ಗಾರನ ಪುರೋಹಿತ ಮಹಾಬಲೇಶ್ವರ ಗೋಪಾಲಕೃಷ್ಣ ದೀಕ್ಷಿತ್ ಆಗಮಿಸಿದ್ದರು. ಪೂಜೆಗೂ ಮುನ್ನ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ನಿಮ್ಮ ಕುಲ, ನಕ್ಷತ್ರ ಯಾವುದು ಎಂದು ಪ್ರಶ್ನಿಸಿದರು. ತಕ್ಷಣ ಸಚಿವ ಜಾರಕಿಹೊಳಿ ಅವರು ನಮ್ಮದು ಮಾನವ ಕುಲ, ಮಾನವ ನಕ್ಷತ್ರ ಎಂದರು.
ಪುರೋಹಿತರು ಸಹ ಸತೀಶ್ ಜಾರಕಿಹೊಳಿ ಅವರದು ಮಾನವ ಕುಲ, ಮಾನವ ನಕ್ಷತ್ರ ಎಂದೇ ಮಂತ್ರಘೋಷದಲ್ಲಿ ಸೇರಿಸಿ ಪೂಜೆ ಮಾಡಿದರು.
ಸತೀಶ್ ಜಾರಕಿಹೊಳಿ ಅವರ ನಡೆ, ಪುರೋಹಿತರ ಮಂತ್ರ ಸರಳವಾಗಿ ನಡೆದು ಹೋದವು. ಮೂಢ ನಂಬಿಕೆ, ಅಂಧಶ್ರದ್ಧೆ ವಿರುದ್ಧ ದಶಕಕ್ಕೂ ಹೆಚ್ಚು ಕಾಲದಿಂದ ಕ್ರಿಯಾಶೀಲ ಕಾರ್ಯ ಹಾಗೂ ನಡೆ ಹೊಂದಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಸಾರ್ವಜನಿಕ ಜೀವನದಲ್ಲಿ ಸಹ ರಾಜಿ ಮಾಡಿಕೊಂಡವರಲ್ಲ ಎಂದು ತೋರಿಸಿದರು.
ಸ್ಮಶಾನದಲ್ಲಿ ವೈಚಾರಿಕ ಭಾಷಣ , ಊಟ,ನಿದ್ರೆ ಮಾಡುವ ಮೂಲಕ ಜನತೆಯಲ್ಲಿನ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಪ್ರತಿ ವರ್ಷ ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುತ್ತಾ ಬಂದಿರುವುದು ಇಲ್ಲಿ ಸ್ಮರಣೀಯ.