ವಿಜಯಪುರ: ಕೋವಿಡ್ ಒಮಿಕ್ರಾನ್ ಹಿನ್ನೆಯಲ್ಲಿ ಮಹಾರಾಷ್ಟ್ರದ ಗಡಿಯಲ್ಲಿರುವ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‌ಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪರಿಶೀಲಿಸಿದರು.
ಅಲ್ಲದೇ ಚೆಕ್‌ಪೋಸ್ಟ್ ಬಳಿ ಓರ್ವ ಶಿಕ್ಷಕರಿಗೆ ಸ್ಥಳದಲ್ಲೇ ಕೋವಿಡ್ ಪರೀಕ್ಷೆಗೆ ಮಾಡಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಮಹಾರಾಷ್ಟ್ರದ ಗಡಿಯಲ್ಲಿರುವ ಜಿಲ್ಲೆಯ ತಿಕೋಟಾ ತಾಲೂಕಿನ ಸಿದ್ದಾಪುರ ಬಳಿಯ ಚೆಕ್‌ಪೋಸ್ಟ್‌ಗೆ ಬುಧವಾರ ಭೇಟಿ ನೀಡಿ, ಕೋವಿಡ್ ತಪಾಸಣೆ ಪರಿಶೀಲಿಸಿದರು.
ಅಲ್ಲದೇ ವಿಜಯಪುರ ಸಯಾಯಕ ಆಯುಕ್ತ ಬಲರಾಮ್ ಲಮಾಣಿ, ತಿಕೋಟಾ ತಹಶೀಲ್ದಾರ್ ಮಲ್ಲಿಕಾರ್ಜುನ ಅರಕೇರಿ ಅವರಿಂದ ಮಾಹಿತಿ ಪಡೆದ ಸಚಿವೆ, ಕೋವಿಡ್ ವಿಷಯದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಬರುವವರನ್ನು ಕಟ್ಟು ನಿಟ್ಟಿನ ತಪಾಸಣೆ ಮಾಡುವಂತೆ ತಾಕೀತು ಮಾಡಿದರು. ತಪಾಸಣೆ ಇಲ್ಲದೆ ಯಾರನ್ನೂ ಒಳಗೆ ಬಿಡಕೂಡದು. ಅಗತ್ಯ ಎನಿಸಿದಲ್ಲಿ ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ನಗರದಿಂದ ನಿತ್ಯವೂ ಮಹಾರಾಷ್ಟ್ರ ರಾಜ್ಯದ ನಿತ್ಯ ಶಾಲೆಗೆ ಹೋಗಿ ಬರುವ ಓರ್ವ ಶಿಕ್ಷಕ ಕೋವಿಡ್ ಪರೀಕ್ಷೆ ಮಾಡಿಕೊಳ್ಳದೇ ಓಡಾಟ ನಡೆಸಿದ್ದಕ್ಕೆ ಸಚಿವೆ ಜೊಲ್ಲೆ ಆಕ್ರೋಶ ಹೊರ ಹಾಕಿದರು.
ಗಿರೀಶ್ ಹಿರೇಮಠ ಎಂಬ ಶಿಕ್ಷಕರು ವಿಜಯಪುರ ನಗರದಿಂದ ನಿತ್ಯವೂ ಮಹಾರಾಷ್ಟ್ರದ ಬಬಲಾದಿ ಗ್ರಾಮದ ಶಾಲೆಗೆ ಹೋಗಿ ಬರುತ್ತಾರೆ. ಆದರೆ ಸದರಿ ಶಿಕ್ಷಕನ ಬಳಿ ತಾವು ಶಿಕ್ಷಕ ಎಂಬುದಕ್ಕೆ ಯಾವ ದಾಖಲೆಯೂ ಇರಲಿಲ್ಲ, ಗುರುತಿನ ಪತ್ರವೂ ಇರಲಿಲ್ಲ. ಹೀಗಾಗಿ ಸಚಿವೆ ಜೊಲ್ಲೆ ಶಿಕ್ಷಕ ಗಿರೀಶ ಅವರಿಗೆ ಚೆಕ್‌ಪೋಸ್ಟ್ ಸ್ಥಳದಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿದರು. ಗಂಟಲು ದ್ರವದ ಮಾದರಿ ವೈದ್ಯಕೀಯ ಪ್ರಯೋಗಾಲಯದ ವರದಿಯಲ್ಲಿ ನೆಗೆಟಿವ್ ಬಂದರಷ್ಟೇ ಪ್ರವೇಶ ನೀಡಬೇಕು. ಅಲ್ಲದೇ ಶಿಕ್ಷಕರು ಗುರುತಿನ ಚೀಟಿ ಇಲ್ಲದೇ ಓಡಾಡಲು ಅವಕಾಶ ನೀಡದಂತೆ ಎಚ್ಚರಿಸಿದರು.