Advertisement

ಸಾಗರಮಾಲಾದಿಂದ ಬಂದರುಗಳ ಸಾಮರ್ಥ್ಯ ವರ್ಧನೆ: ಸಚಿವ ಸರ್ಬಾನಂದ ಸೋನೊವಾಲ್‌

12:14 AM Oct 14, 2022 | Team Udayavani |

ಮಂಗಳೂರು: ದೇಶದೊಳಗಿನ ಎಲ್ಲ ಬಂದರುಗಳ ಸಾಮರ್ಥ್ಯ ಸುಧಾರಣೆ ಗಾಗಿ ಸಾಗರಮಾಲಾದಿಂದ 800ಕ್ಕೂ ಅಧಿಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು ಹಂತ ಹಂತವಾಗಿ ಅವುಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಕೇಂದ್ರ ನೌಕಾಯಾನ ಸಚಿವ ಸರ್ಬಾನಂದ ಸೋನೊವಾಲ್‌ ಹೇಳಿದ್ದಾರೆ.

Advertisement

ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮರ್ಮಗೋವಾ ಬಂದರು ಪ್ರಾಧಿಕಾರಗಳ ವಿವಿಧ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ವರ್ಚುವಲ್‌ ವೇದಿಕೆಯಲ್ಲಿ ಗುರುವಾರ ನೆರವೇರಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಬಂದರುಗಳ ಕೊಡುಗೆಯನ್ನು ಗಮನದಲ್ಲಿರಿಸಿ ಪ್ರಧಾನಿ ಮೋದಿಯವರು ಹಾಕಿಕೊಂಡ ಸಾಗರಮಾಲಾ ಕಾರ್ಯಕ್ರಮದಡಿ 802 ಯೋಜನೆಗಳು ನಡೆಯುತ್ತಿವೆ. ಇದರಲ್ಲಿ 200ಕ್ಕೂ ಅಧಿಕ ಯೋಜನೆಗಳು ಪೂರ್ಣಗೊಂಡಿವೆ. ಬಂದರುಗಳ ಆಧುನೀಕರಣ ನಡೆಯುತ್ತಿದೆ. ಬಂದರು ಮುಖೀ ಕೈಗಾರಿಕೀಕರಣ, ಬಂದರುಮುಖೀ ಸಂಪರ್ಕ ವ್ಯವಸ್ಥೆ, ಕರಾವಳಿ ಸಮುದಾಯ ಅಭಿವೃದ್ಧಿ, ಕರಾವಳಿ ನೌಕಾಯಾನ ಮತ್ತು ಜಲಮಾರ್ಗಗಳ ಅಭಿವೃದ್ಧಿ ಹಂತಹಂತವಾಗಿ ನಡೆಯುತ್ತಿದೆ ಎಂದರು.

ಸರಕು ನಿರ್ವಹಣೆ ದಿನದಿಂದ ದಿನಕ್ಕೆ ಏರುತ್ತಿದೆ, ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯಿಂದಾಗಿ ವಿಶ್ವದ ದೊಡ್ಡ ಬಂದರುಗಳ ಜತೆ ಕೂಡ ನಮ್ಮ ದೇಶದ ಬಂದರುಗಳು ಈಗ ಪೈಪೋಟಿಯೊಡ್ಡುತ್ತಿವೆ ಎಂದ ಅವರು ವಿಕಾಸದ ವೇಗ ಹೆಚ್ಚಿಸಲು ಎಲ್ಲರ ಸಹಯೋಗ ಬೇಕು ಎಂದರು.

ಕೇಂದ್ರ ಸಚಿವ ಶ್ರೀಪಾದ ಯಸೊÕ ನಾಯಕ್‌, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ರಾಜ್ಯ ಸಭಾ ಸದಸ್ಯ ವಿಜಯ್‌ ತೆಂಡುಲ್ಕರ್‌ ಮತ್ತಿತರರಿದ್ದರು. ಎನ್‌ಎಂಪಿಎ ಹಾಗೂ ಮರ್ಮಗೋವಾ ಬಂದರು ಪ್ರಾಧಿಕಾರದ ಚೇರ್ಮನ್‌ ಡಾ| ಎ.ವಿ. ರಮಣ ಸ್ವಾಗತಿಸಿದರು.

Advertisement

ರಸ್ತೆ ಸುಧಾರಣೆ,  ಟ್ರಕ್‌ ಟರ್ಮಿನಲ್‌:

ಬಂದರು ಪ್ರಾಧಿಕಾರದ ಮುಖ್ಯ ಗೇಟ್‌ನಿಂದ ಕುದುರೆಮುಖ ಜಂಕ್ಷನ್‌ ವರೆಗೆ 700 ಮೀಟರ್‌ ಉದ್ದಕ್ಕೆ ಇದ್ದ ಸರ್ವಿಸ್‌ ರಸ್ತೆಯನ್ನು ಅಗಲಗೊಳಿಸಿ, ಕಾಂಕ್ರೀಟ್‌ ಹಾಕುವ 3.75 ಕೋಟ ರೂ. ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಕಾಮಗಾರಿಯು 2023ರ ಫೆಬ್ರವರಿಯಲ್ಲಿ ಪೂರ್ತಿಗೊಳ್ಳಲಿದೆ.

ಕಸ್ಟಂಸ್‌ ಹೌಸ್‌ ಸಮೀಪ ಈಗಿರುವ ಟ್ರಕ್‌ ಟರ್ಮಿನಲ್‌ ಅನ್ನು 3.71 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. 200ರಷ್ಟು ಟ್ರಕ್‌ಗಳನ್ನು ಇಲ್ಲಿ ಪಾರ್ಕ್‌ ಮಾಡುವ ಸೌಲಭ್ಯ ಇರಲಿದೆ.

ಮಲ್ಯಗೇಟ್‌ ಲೋಕಾರ್ಪಣೆ :

ಮುಖ್ಯಪ್ರವೇಶ ದ್ವಾರವಾದ ಯು.ಎಸ್‌.ಮಲ್ಯ ಗೇಟ್‌ ಅನ್ನು ದ್ವಿಪಥದಿಂದ ಚತುಷ್ಪಥವಾಗಿ ಪರಿವರ್ತಿಸಲಾಗಿದ್ದು 3.30 ಕೋಟಿ. ರೂ ವೆಚ್ಚದಲ್ಲಿ ಸುಧಾರಣೆಗೊಳಪಡಿಸಲಾಗಿದೆ. ಅಲ್ಲದೆ ಪರಿಸರ ನಿರ್ವಹಣೆ ಉದ್ದೇಶದೊಂದಿಗೆ 50 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣ ಘಟಕವನ್ನೂ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next