ಬೆಂಗಳೂರು: ಕೋವಿಡ್ 19ರ ಸನ್ನಿವೇಶದಲ್ಲಿ ನನ್ನ ಕ್ಷೇತ್ರದ ಜನತೆಯ ಸೇವಕನಾಗಿ ಅವರ ಅವಶ್ಯಕತೆಗಳನ್ನು ಪೂರೈಸುವುದು ನನ್ನ ಕರ್ತವ್ಯ. ಈ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಸಹಾಯಧನವನ್ನು ವೈಯುಕ್ತಿಕವಾಗಿ ನೀಡುವ ವ್ಯವಸ್ಥೆ ಮಾಡಿದ್ದೇನೆ ಎಂದು ಯಶವಂತಪುರ ಶಾಸಕ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕೋವಿಡ್-19 ರಿಂದ ಮೃತಪಟ್ಟ ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶ್ರೀಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಚಾಲನೆ ನೀಡಿದರು.
ಇದನ್ನೂ ಓದಿ:ಆಸ್ಪತ್ರೆಗೆ ಬರಲು ಸಾಧ್ಯವಾಗದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತೇವೆ : ಅಶ್ವತ್ಥ್ ನಾರಾಯಣ್
ಬಳಿಕ ಮಾತನಾಡಿದ ಸಚಿವರು, ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್ ಹಾಗೂ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವೈಯುಕ್ತಿಕವಾಗಿ ಪರಿಹಾರ ನೀಡುತ್ತಿದ್ದೇನೆ. ಇಂದಿನಿಂದ ನಿತ್ಯ ಒಂದೊಂದು ವಾರ್ಡ್‌ನಲ್ಲಿಯೂ ಸೋಂಕಿನಿಂದ ಮೃತಪಟ್ಟ ಕುಟುಂಬಸ್ಥರಿಗೆ ತಲಾ 1 ಲಕ್ಷ ನಗದು ವಿತರಣೆ ಮಾಡಲಾಗುವುದು. ಇಂದು ಕೆಂಗೇರಿ ವಾರ್ಡ್ 159 ಲ್ಲಿ 27 ಕುಟುಂಬಗಳಿಗೆ ತಲಾ ಒಂದು ಲಕ್ಷ ನಗದು ಹಣ ವಿತರಣೆ ಮಾಡಿದ್ದೇವೆ. ನಾಳೆಯಿಂದ 17 ಪಂಚಾಯಿತಿ ವ್ಯಾಪ್ತಿ ಹಾಗೂ 5 ವಾರ್ಡ್‌ನ ಜನರಿಗೆ ಧನಸಹಾಯ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಆಸ್ಪತ್ರೆಗೆ ದಾಖಲಾದವರಿಗೆ ತಲಾ 25, 50 ಸಾವಿರ ರೂ. ವೈಯಕ್ತಿಕ ಸಹಾಯ: ಕ್ಷೇತ್ರದ ಜನರು ಕೋವಿಡ್ ಪರೀಕ್ಷೆಗೊಳಪಟ್ಟ ಸಂದರ್ಭದಿಂದಲೇ ನಿಗಾ ವಹಿಸಲಾಗುವುದು. ಅವರಿಗೆ ಚಿಕಿತ್ಸೆ ಅವಶ್ಯಕತೆ ಇದ್ದರೆ ಆಸ್ಪತ್ರೆಗೆ ದಾಖಲಿಸುವುದು, ಔಷಧಗಳ ವ್ಯವಸ್ಥೆ ಮಾಡಿಸುವುದು ಸೇರಿದಂತೆ ನಮ್ಮೆಲ್ಲ ಕಾರ್ಯಕರ್ತರು ಯೋಗಕ್ಷೇಮಗಳನ್ನು ವಿಚಾರಿಸಿಕೊಳ್ಳುತ್ತಾರೆ. ಇದಕ್ಕಾಗಿ ನಮ್ಮ 1 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಇದರಲ್ಲಿ ಪ್ರತಿದಿನ ನಿರತರಾಗಿದ್ದಾರೆ. ಬಿಬಿಎಂಪಿ ಮೂಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ 25 ಸಾವಿರ ರೂಪಾಯಿ, ಸರ್ಕಾರಿ ಕೋಟಾ ಇಲ್ಲದೆ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತಹ ಕುಟುಂಬಗಳಿಗೆ ತುರ್ತು ಔಷಧಕ್ಕೋಸ್ಕರ 50 ಸಾವಿರ ರೂಪಾಯಿಯನ್ನು ವೈಯುಕ್ತಿಕವಾಗಿ ನೀಡುತ್ತಿದ್ದೇನೆ. ಇದಲ್ಲದೆ, ಇಡೀ ಕ್ಷೇತ್ರದಲ್ಲಿ ಪಾಸಿಟಿವ್ ಬಂದಿರುವ ಸುಮಾರು 5 ಸಾವಿರ ಕುಟುಂಬದವರ ಮನೆಗಳಿಗೆ ಉಚಿತ ಸ್ಯಾನಿಟೈಸ್ ಮಾಡಿಸುತ್ತಿದ್ದೇನೆ. ಮತ್ತು ಈ ಎಲ್ಲ ಮನೆಯವರು ಹೊರಗೆ ಸಂಚರಿಸಬಾರದು ಎಂಬ ನಿಟ್ಟಿನಲ್ಲಿ ದಿನಸಿ ಕಿಟ್, ಔಷಧ ಕಿಟ್ ಗಳನ್ನು ಕೊಡುವ ವ್ಯವಸ್ಥೆಯನ್ನೂ ಮಾಡಿದ್ದೇನೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.