Advertisement

ಬೀಚ್‌ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌: ಅಂಗಾರ

12:06 AM Feb 04, 2022 | Team Udayavani |

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿ ತಮ್ಮ ಕಚೇರಿಯನ್ನು ಆರಂಭಿಸಿ, ಅಧಿಕೃತವಾಗಿ ಕಾರ್ಯಾರಂಭ ಮಾಡಿರುವ ಮೀನುಗಾರಿಕೆ ಹಾಗೂ ಬಂದರು ಇಲಾಖೆ ಸಚಿವ ಎಸ್‌. ಅಂಗಾರ ಅವರು ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗೆಗಿನ ಪರಿಕಲ್ಪನೆಯನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ. ಅವರೊಂದಿಗಿನ ಕಿರು ಸಂದರ್ಶನ ಇಲ್ಲಿದೆ.

Advertisement

ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಹೇಗಿದೆ?

ಸಾರ್ವಜನಿಕರ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ನಿಟ್ಟಿನಲ್ಲಿ ಆಯಾ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ನೀಡಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾಡಳಿತದಿಂದ ಮಾಹಿತಿ ಪಡೆಯುವ ಜತೆಗೆ ಹಿರಿಯರಿಂದ ಮಾರ್ಗದರ್ಶನ, ವಿವಿಧ ಸಂಘಟನೆಗಳ ಪ್ರಮುಖರಿಂದ ಸಲಹೆ ಪಡೆಯಲಿದ್ದೇನೆ. ಒಟ್ಟಾರೆಯಾಗಿ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ.

ಮುಂದಿರುವ ಯೋಜನೆಗಳು?

ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಹಾಗೂ ಪಡೆಯದೇ ಇರುವ ಬೀಚ್‌ಗಳು ಇವೆ. ಎಲ್ಲ ಬೀಚ್‌ಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸುತ್ತಿದ್ದೇವೆ. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಬಜೆಟ್‌ ಮಂಡನೆಗೂ ಪೂರ್ವದಲ್ಲೇ ಚರ್ಚೆ ನಡೆಸಲಾಗುತ್ತದೆ. ಬಂದರು ಅಭಿವೃದ್ಧಿ, ಸಮುದ್ರ ಹಾಗೂ ಒಳನಾಡು ಮೀನುಗಾರಿಕೆಯನ್ನು ಇನ್ನಷ್ಟು ಸುಧಾರಿತ ರೀತಿಯನ್ನು ನಡೆಸಲು ಯೋಜನೆ ಮಾಡಿಕೊಂಡಿದ್ದೇವೆ. ದ್ವೀಪಗಳನ್ನು ಗುರುತಿಸಿ, ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದೇವೆ.

Advertisement

ಪ್ರವಾಸೋದ್ಯಮಕ್ಕೆ ಯಾವ ರೀತಿಯ ಪ್ರೋತ್ಸಾಹ ಸಿಗಲಿದೆ?

ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೂ ವಿಪುಲ ಅವಕಾಶವಿದೆ. ಇಲ್ಲಿ ಹಲವು ಧಾರ್ಮಿಕ ಕ್ಷೇತ್ರಗಳಿರುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬರುತ್ತಿರುತ್ತಾರೆ. ಧಾರ್ಮಿಕ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಿದ್ದೇವೆ. ಇದರ ಜತೆಗೆ ಇಡೀ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲಿದ್ದೇವೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ.

ಮರಳು ಸಮಸ್ಯೆ ನಿವಾರಣೆಯಾಗಲಿದೆಯೇ?

ಮರಳು ಸಮಸ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರು ಸ್ಪಷ್ಟ ಸಂದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಸಮಸ್ಯೆ ಯಾವ ರೀತಿಯಲ್ಲಿದೆ ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಅನಂತರ ಕ್ರಮ ಕೈಗೊಳ್ಳುವೆ.

ಸ್ಥಳೀಯ ಭತ್ತ ಉತ್ಪಾದನೆಗೆ ಹೆಚ್ಚಿಸಲು ಏನು ಕ್ರಮ ತೆಗೆದುಕೊಳ್ಳಲಾಗುವುದು?

ಸ್ಥಳೀಯ ಭತ್ತ ಖರೀದಿಗೆ ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ (ಸ್ಥಳೀಯ ಕುಚ್ಚಲು ಅಕ್ಕಿ) ವಿತರಣೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ವರ್ಷ ಸ್ಥಳೀಯ ಭತ್ತ ಸಿಗದೆ ಇರಬಹುದು. ಆದರೆ ಮುಂದಿನ ವರ್ಷದಿಂದ ಸ್ಥಳೀಯ ಭತ್ತವನ್ನು ಖರೀದಿಸುವ ಜತೆಗೆ ಭತ್ತದ ಉತ್ಪಾದನೆಯನ್ನು ಹೆಚ್ಚಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಿದ್ದೇವೆ.

ಅಂತರ್ಜಲ ಹೆಚ್ಚಳಕ್ಕೆ ಏನು ಕ್ರಮ?

ಜಿಲ್ಲೆಯಲ್ಲಿ ಕೃಷಿ ಮತ್ತು ಅಂತರ್ಜಲ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಿದ್ದೇವೆ. ಈಗಾಗಲೇ ನಿರ್ಮಿಸಿರುವ ಹಾಗೂ ಮುಂದೆ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯನ್ನು ಸ್ಥಳೀಯವಾಗಿ ವ್ಯವಸ್ಥಿತ ರೀತಿಯಲ್ಲಿ ನಡೆಸಬೇಕಾಗುತ್ತದೆ. ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಕೃಷಿಗೆ ಅನುಕೂಲವಾಗುವ ಜತೆಗೆ ಅಂತರ್ಜಲಮಟ್ಟವೂ ಹೆಚ್ಚಲಿದೆ.

ಪ್ರತೀ ಸೋಮವಾರ ಅಹವಾಲು ಸ್ವೀಕಾರ :

ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪ್ರತೀ ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ನನ್ನ ಕಚೇರಿಯಲ್ಲಿ ಲಭ್ಯವಿರುತ್ತೇನೆ. ಅಂದು ಸಾರ್ವಜನಿಕರು ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯವನ್ನು ಮಾಡಲಿದ್ದೇನೆ ಎಂದು ಸಚಿವ ಎಸ್‌. ಅಂಗಾರ ತಿಳಿಸಿದ್ದಾರೆ.

ಸಚಿವರ ಕಚೇರಿ ದೂರವಾಣಿ: 0820 2574988

Advertisement

Udayavani is now on Telegram. Click here to join our channel and stay updated with the latest news.

Next