Advertisement

ಕರಾವಳಿಯಲ್ಲಿ ಸಚಿವ ರೇವಣ್ಣ ತೀರ್ಥಯಾತ್ರೆ

10:24 AM Jul 15, 2019 | Team Udayavani |

ಕುಂದಾಪುರ/ಕೊಲ್ಲೂರು/ ಧರ್ಮಸ್ಥಳ: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಧಾನಿಯಲ್ಲಿದ್ದು ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳುವ ಕಸರತ್ತಿನಲ್ಲಿ ನಿರತರಾಗಿದ್ದರೆ ಕುಟುಂಬದ ಇನ್ನೋರ್ವ ಹಿರಿಯ ರಾಜಕಾರಣಿ, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ರವಿವಾರ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಅರ್ಪಿಸಿದರು.

Advertisement

ಮೈತ್ರಿ ಸರಕಾರ ಅಧಿಕಾರ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಿರತವಾಗಿರುವ ಹೊತ್ತಿನಲ್ಲೇ ಸಚಿವರು ದೇವರ ಮೊರೆ ಹೊಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ. ದಿನದ ಆರಂಭದಲ್ಲಿ ಕೊಲ್ಲೂರು, ಆನೆಗುಡ್ಡೆ ಹಟ್ಟಿಯಂಗಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೊಲ್ಲೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತೇನೆ. ಇದಕ್ಕೂ ರಾಜ್ಯದ ಈಗಿನ ರಾಜಕೀಯಕ್ಕೂ ಸಂಬಂಧವಿಲ್ಲ. ಮೂಕಾಂಬಿಕೆಯ ಭಕ್ತನಾಗಿರುವ ನಾನು ಅನೇಕ ಬಾರಿ ಅಮ್ಮನ ದರ್ಶನ ಮಾಡಿದ್ದೇನೆ. ಕ್ಷೇತ್ರದ ಶಕ್ತಿ ನನಗೆ ಪ್ರೇರಣೆಯಾಗಿದೆ. ರಾಜಕೀಯ ಭವಿಷ್ಯದ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ. ಅಮ್ಮ ಮೂಕಾಂಬಿಕೆ ಆಶೀರ್ವಾದ ಮಾಡಿರುತ್ತಾಳೆ ಎಂದರು.

ಕಟೀಲು ಭೇಟಿ; ಮಾಧ್ಯಮದವರೊಂದಿಗೆ ಸಿಡುಕು
ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ರೇವಣ್ಣ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅಲ್ಲಿ ಅವರು ಪ್ರಸಾದ ಸ್ವೀಕರಿಸುತ್ತಿದ್ದುದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮ ಸಿಬಂದಿಯೊಂದಿಗೆ ಸಿಡುಕು ಪ್ರದರ್ಶಿಸಿ ಚಿತ್ರೀಕರಣವನ್ನು ತಡೆದರು. ಚಿತ್ರೀಕರಿಸಿದ್ದನ್ನು ಅಳಿಸುವಂತೆ ತಮ್ಮ ಜತೆಗಿದ್ದ ಪೊಲೀಸರಿಗೆ ಸೂಚಿಸಿದರು.

ಧರ್ಮಸ್ಥಳಕ್ಕೆ
ರೇವಣ್ಣ ಅವರು ಬಳಿಕ ರವಿವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸಂಜೆ ಐದೂವರೆಗೆ ಕಟೀಲಿನಿಂದ ಕಾರಿನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ರೇವಣ್ಣ ಅವರು ಸನ್ನಿಧಿ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದು. ಸಂಜೆ 6 ಗಂಟೆಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ದೇವರಿಗೆ ವಿಶೇಷ ಸೇವೆ ಸಲ್ಲಿಸಿ ಪ್ರಾರ್ಥಿಸಿದರು.

Advertisement

ಅನಂತರ ಧರ್ಮಾಧಿಕಾರಿ ಡಾ| ಡಿ. ವೀರೆಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸರಕಾರ ಉಳಿವು ಅಳಿವಿನ ವಿಚಾರ ದೇವರಿಗೆ ಬಿಟ್ಟಿದ್ದು, ಅಧಿಕಾರ ಕೊಟ್ಟಿದ್ದಾನೆ; ಉಳಿಸುವುದು ಬಿಡುವುದು ಅವನ ಕೈಯಲ್ಲಿದೆ. ದೇವರ ಸನ್ನಿಧಿಗೆ ಬಂದಿದ್ದೇನೆ. ಅತೃಪ್ತ ಶಾಸಕರ ಕುರಿತು ನಾನು ಏನೂ ಪ್ರತಿಕ್ರಿಸುವುದಿಲ್ಲ ಎಂದರು. ಬಳಿಕ ಬೆಂಗಳೂರು ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next