Advertisement

ಸಚಿವ ರಾಮುಲು ಸಹ ಬೇಲ್‌ ಮೇಲಿದ್ದಾರೆ; ಮಾಜಿ ಸಂಸದ ಉಗ್ರಪ್ಪ

06:15 PM Oct 18, 2022 | Team Udayavani |

ಬಳ್ಳಾರಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ಬೇಲ್‌ ಮೇಲೆ ಹೊರಗಿದ್ದಾರೆ ಎಂದಿರುವ ಬಿಜೆಪಿ ಸಚಿವ ಶ್ರೀರಾಮುಲು ಸಹ ಸಾರ್ವಜನಿಕ ಆಸ್ತಿ ಕಬಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ಪಡೆದು ಹೊರಗಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ತಿರುಗೇಟು ನೀಡಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಸಚಿವ ಶ್ರೀರಾಮುಲು ಸಹ ಸಾರ್ವಜನಿಕರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರಿಮಿನಲ್‌ ಕೇಸು ದಾಖಲಾಗಿದೆ. ಜೊತೆಗೆ ಅವರೀಗ ಬೇಲ್‌ ಮೇಲೆ ಹೊರಗಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

2011ರಲ್ಲಿ ಭೂ ಕಬಳಿಕೆ ಸಂಬಂಧ ದಾಖಲಾಗಿದ್ದ ಪ್ರಕರಣ, ರಾಜ್ಯ ಹೈಕೋರ್ಟ್‌ ಸೂಚನೆಯಂತೆ ಜಿಲ್ಲಾ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ವಿಚಾರಣೆಗೆ
ಅನುಮತಿ ದೊರೆತಿದೆ. ಇದು ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಮಾವ ಪರಮೇಶ್ವರ ರೆಡ್ಡಿಯವರನ್ನೊಳಗೊಂಡ ಭೂ ಕಬಳಿಕೆ ಪ್ರಕರಣ. ಇದರಲ್ಲಿ ರಾಮುಲು ಅವರು 6ನೇ ಆರೋಪಿಯಾಗಿದ್ದು, ಹಾಲಿ ಬೇಲ್‌ ಮೇಲೆ ಹೊರಗಿದ್ದಾರೆ ಎಂದು ಆರೋಪಿಸಿದರು.

ಪದೇ ಪದೇ ನಮ್ಮ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ರಾಮುಲು ಖುದ್ದು ಬಳ್ಳಾರಿ ಜನ ತಮ್ಮನ್ನು ಸೋಲಿಸುತ್ತಾರೆ ಎಂಬ ಆತಂಕದಿಂದ ತಮ್ಮ ಕ್ಷೇತ್ರ ಬಿಟ್ಟು ಬಾದಾಮಿ, ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದು ಸುಳ್ಳೇ ಎಂದು ಅವರು ಕಿಡಿಕಾರಿದರು. ರಾಮುಲು ಅವರು ಸತ್ಯವಂತರು, ಪ್ರಾಮಾಣಿಕರು ಆಗಿದ್ದರೆ ಅವರು ಮಾಡಿದ ಈ ಪ್ರಕರಣದ ಕುರಿತು ಬಹಿರಂಗ ಚರ್ಚೆಗೆ ಬರಲಿ. ಈ ಕುರಿತು ಪ್ರತಿಯೊಂದು ಮಾಹಿತಿ ನನ್ನ ಬಳಿ ಇದೆ. ಎಲ್ಲವನ್ನೂ ನಾನು ಅಧಿಕೃತವಾಗಿ ಪಡೆದುಕೊಂಡಿದ್ದೇನೆ.

ಈ ವಿಷಯದಲ್ಲಿ ರಾಮುಲು ಪ್ರಮಾದ ಎಸಗಿರುವುದು ಮೇಲ್ನೋಟಕ್ಕೆ ನಿಜ ಎಂಬುದು ತಿಳಿಯುತ್ತದೆ ಎಂದರು. 2011ರಲ್ಲಿ ಒಂದೇ ದಿನ ರಾಮುಲು ಮತ್ತು ಜನಾರ್ಧನ ರೆಡ್ಡಿ ಮಾವ ಪರಮೇಶ್ವರ ರೆಡ್ಡಿ 27.25 ಎಕರೆ ಜಮೀನನ್ನು ಇಬ್ಬರೂ ಖರೀದಿಸುತ್ತಾರೆ. ಪರಮೇಶ್ವರ ರೆಡ್ಡಿಯವರು ಖರೀದಿಸಿದ್ದ ಜಮೀನಿನ ಪೈಕಿ 10 ಎಕರೆ ಜಮೀನು ಕಾಲುವೆಗೆ ಹೊಗುತ್ತದೆ. ಉಳಿದ ಭೂಮಿಯನ್ನು ಅವರ ಪುತ್ರಿ, ಜನಾರ್ಧನ ರೆಡ್ಡಿ ಪತ್ನಿ ಅರುಣ ಅವರ ಹೆಸರಿಗೆ ದಾನಪತ್ರ ಮೂಲಕ
ನೀಡುತ್ತಾರೆ. ಆದರೆ, ರಾಮುಲು ನಕಲಿ ಖರೀದಿ ಪತ್ರದ ಆಧಾರದ ಮೇಲೆ ಅವರು ತಮ್ಮದೂ 27.25 ಎಕರೆ ಜಮೀನು ಇದೆ ಎಂಬುದನ್ನು ನ್ಯಾಯಾಲಯದಿಂದ 39 ದಿನಗಳಲ್ಲಿ ಎಕ್ಸ್‌ ಪಾರ್ಟಿ ಆದೇಶ ತರುತ್ತಾರೆ ಎಂದು ವಿವರಿಸಿದರು.

Advertisement

ಹಾಗೆ ಪಡೆದ ಆದೇಶದ ಮೂಲಕ ಪರಮೇಶ್ವರ ರೆಡ್ಡಿ ಖರೀದಿಸಿದ್ದ ಜಾಗದ ಪಕ್ಕದಲ್ಲಿನ ಅದೇ ಸರ್ವೇ ನಂಬರ್‌ನಲ್ಲಿನ ಬಹುಭಾಷ ನಟಿ ರಮ್ಯಕೃಷ್ಣ ಅವರ ಸಂಬಂ ಧಿ ಹಾಗೂ ಇತರರಿಗೆ ಸೇರಿದ ಜಮೀನನ್ನು ಕಬಳಿಸುತ್ತಾರೆ. ಇದರಲ್ಲಿ ಜಿಲ್ಲಾ ಧಿಕಾರಿ, ಡಿಡಿಎಲ್‌ಆರ್‌, ಸರ್ವೆಯರ್‌, ಉಪ ಆಯುಕ್ತ, ತಹಶೀಲ್ದಾರ್‌ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದಾರೆ. ಇದೀಗ ಎಲ್ಲರ ಮೇಲೂ ಪ್ರಕರಣ ದಾಖಲಾಗಿದೆ. ರಾಮುಲು ಅವರು ಸಾಚಾ ಆಗಿದ್ದರೆ ಇವೆಲ್ಲಾ ಏಕೆ ಎಂದು ಅವರು ಕುಟುಕಿದರು. ರಾಮುಲು ನಿಜವಾಗಲೂ ಪ್ರಾಮಾಣಿಕರು, ಜನಪರ ಎಂದಾದರೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ಅವರು ಕೊಡದೇ ಇದ್ದರೆ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲವೇ ರಾಜ್ಯಪಾಲರು ಅವರ ಮೇಲೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ದಿವಾಕರ್‌ ಬಾಬು, ಮುಖಂಡ ಸುನೀಲ್‌ ರಾವೂರ್‌, ಬಿ.ಎಂ.ಪಾಟೀಲ್‌, ಲೋಕೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next