Advertisement

ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ

05:28 PM May 19, 2021 | Team Udayavani |

ಭಟ್ಕಳ: ತೌಕ್ತೆ ಚಂಡಮಾರುತದಿಂದ ಭಟ್ಕಳ ತಾಲೂಕಿನಲ್ಲಿ ಅತಿಯಾದ ಹಾನಿಯಾಗಿದ್ದು ಪರಿಶೀಲಿಸಲು ಸ್ವತಹ ಕಂದಾಯ ಸಚಿವ ಆರ್‌. ಅಶೋಕ ಭೇಟಿ ನೀಡಿ ಹಾನಿಯ ಅಂದಾಜು ಮಾಡಿ, ಸೂಕ್ತ ಪರಿಹಾರ ವಿತರಿಸಲು ಸೂಚಿಸಿದರು.

Advertisement

ಅವರು ಪ್ರಥಮವಾಗಿ ತೆಂಗಿನಗುಂಡಿ ಹೇರಿಕೇರಿಗೆ ಭೇಟಿ ನೀಡಿ, ಸಂಪೂರ್ಣ ತಡೆಗೋಡೆಯೇ ಕುಸಿದು ನೀರು ಉಕ್ಕಿ ಹರಿದು ಸುಮಾರು 300ಕ್ಕೂ ಹೆಚ್ಚು ಎಕರೆ ಭೂಮಿಗೆ ಉಪ್ಪು ನೀರು ನುಗ್ಗಿರುವುದುನ್ನು ಹಾಗೂ ಅಕ್ಕಪಕ್ಕದ ಮನೆಗಳಿಗೆ ಅಪಾಯ ಎದುರಾಗಿರುವುದನ್ನು ಪರಿಶೀಲಿಸಿದರು.

ಸ್ಥಳೀಯ ಮಹಿಳೆಯರು ತಡೆಗೋಡೆ ಎತ್ತರಿಸಿ ತಮ್ಮ ಸಂಕಷ್ಟ ಪರಿಹರಿಸುವಂತೆ ಕೋರಿದರು. ರಾತ್ರಿ ಮನೆಯಲ್ಲಿ ಮಲಗಿದರೆ ನಿದ್ದೆ ಬರುವುದಿಲ್ಲ, ಎಷ್ಟೊತ್ತಿಗೆ ಸಮುದ್ರ ಉಕ್ಕಿ ಬರುತ್ತದೋ ಎನ್ನುವ ಭಯ ಕಾಡುತ್ತದೆ ಎಂದು ಸಚಿವರಲ್ಲಿ ಸಂಕಷ್ಟ ತೋಡಿಕೊಂಡರು.

ನಂತರ ಹೆರ್ತಾರ್‌ ಸಮುದ್ರ ಕೊರೆತ ಪ್ರದೇಶ, ಮಾವಿನಕುರ್ವೆ ಬಂದರಿಗೆ ಭೇಟಿ ನೀಡಿ ಬೋಟುಗಳು ಲಂಗರು ಹಾಕಿದ್ದಾಗ ಪರಸ್ಪರ ಡಿಕ್ಕಿಯಾಗಿ ಆಗಿರುವ ಹಾನಿ ಪರಿಶೀಲಿಸಲು ಸ್ವತಹ ಬೋಟನ್ನೇರಿದ ಸಚಿವರು ಬೋಟುಗಳ ಸ್ಟೋರೇಜ್‌ ರೂಮನ್ನು ಬಾಗಿಲು ತೆರೆಯಿಸಿ ಪರಿಶೀಲಿಸಿದರು.

ಕೃಷಿ-ತೋಟಗಾರಿಕೆಗೂ ಪರಿಹಾರ: ಚಂಡ ಮಾರುತದಿಂದ ಅತಿ ಹೆಚ್ಚು ಕೃಷಿ ಭೂಮಿಗೆ ಹಾನಿಯಾಗಿರುವ ಕುರಿತು ತಿಳಿದುಕೊಂಡು ಆರ್‌. ಅಶೋಕ ಅವರು ಕೃಷಿ ಹಾನಿಯಾದವರಿಗೆ ಹಾಗೂ ತೋಟಗಾರಿಕಾ ಬೆಳೆಗಾಳ ಹಾನಿಯಾದವರಿಗೆ ಸೂಕ್ತ ಪರಿಹಾರ ನೀಡುವ ಸಲುವಾಗಿ ಸೂಕ್ತ ಸಮೀಕ್ಷೆ ಮಾಡಿ ಹಾನಿಯ ಅಂದಾಜು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲದೇ ಮನೆ ಕಳೆದುಕೊಂಡವರಿಗೆ ಭಾಗಶಃ ಹಾನಿಯಾದವರಿಗೆ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ಕೂಡಾ ಸರಕಾರದ ಮಾನದಂಡದಂತೆ ಸೂಕ್ತ ಪರಿಹಾರ ನೀಡಲಾಗುವುದು ಎಂದೂ ಅವರು ಭರವಸೆ ನೀಡಿದರು.

Advertisement

ಮಾವಿನಕುರ್ವೆ ಬಂದರಕ್ಕೆ ಭೇಟಿ ನೀಡಿ ಸಚಿವರು ವಾಪಸ್ಸಾಗುತ್ತಿದ್ದಂತೆಯೇ ಮೀನುಗಾರರು ಕೋಪಗೊಂಡಿರುವುದನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಹಾಗೂ ಶಾಸಕ ಸುನೀಲ್‌ ನಾಯ್ಕ ಅವರು ಸಭೆ ಮುಗಿಸಿ ನಂತರ ನೇರವಾಗಿ ಮಾವಿಕುರ್ವೆ ಬಂದರಕ್ಕೆ ತೆರಳಿ ಅತ್ಯಧಿಕ ರಭಸದ ತೆರೆಯಿಂದ ಹಾನಿಗೊಳಗಾದ ಬಂದರು-ತಲಗೋಡ ರಸ್ತೆ ಪರಿಶೀಲಿಸಿದರು. ರಸ್ತೆ ಉಳಿಸಿಲು ತಾತ್ಕಾಲಿಕವಾಗಿ ಕಾಮಗಾರಿ ಮಾಡಲು ತಕ್ಷಣ ಸೂಚಿಸಿದ ಸಚಿವರು ಶಾಶ್ವತ ರಸ್ತೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮೀನುಗಾರರ ಆಕ್ಷೇಪ: ಮಾವಿಕುರ್ವೆ ಬಂದರಿಗೆ ಭೇಟಿ ನೀಡಿದ ಕಂದಾಯ ಸಚಿವ ಆರ್‌. ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌, ಶಾಸಕ ಸುನೀಲ್‌ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ ಮತ್ತಿತರರು ಧಕ್ಕೆಗೆ ಭೇಟಿ ನೀಡಿ ವಾಪಸ್ಸಾಗಿರುವುದಕ್ಕೆ ಮೀನುಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅತ್ಯಧಿಕ ಹಾನಿಗೊಳಗಾದ ತಲಗೋಡ ರಸ್ತೆಯನ್ನು ಪರಿಶೀಲಿಸಬೇಕಿದ್ದ ಸಚಿವರು ನೇರವಾಗಿ ಸಭೆಗೆ ತೆರಳಿರುವುದು ಸರಿಯಲ್ಲ. ಇದು ಕಾಟಾಚಾರದ ಭೇಟಿಯಾಗಿದೆ ಎಂದೂ ದೂರಿದರು. ಅತ್ಯಧಿಕ ಹಾನಿಯಾಗಿರುವ ಪ್ರದೇಶವನ್ನೇ ನೋಡದೇ ವಾಪಸ್ಸಾದರೆ ಹಾನಿಯ ಅಂದಾಜು ಮಾಡುವುದಾದರೂ ಹೇಗೆ. ಇಲ್ಲಿ ನಮಗೆ ಸ್ಥಳದಲ್ಲಿಯೇ ಪರಿಹಾರ ದೊರೆಯಬಹುದು ಎನ್ನುವ ಆಸೆಯಿಟ್ಟುಕೊಂಡಿದ್ದರೆ ಅದು ನಿರಾಸೆಯಾಯಿತು ಎಂದೂ ಅವರು ದೂರಿದ್ದರು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತೆ ಮಮತಾದೇವಿ, ತಹಶೀಲ್ದಾರ್‌ ರವಿಚಂದ್ರ, ಡಿವೈಎಸ್‌ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ್‌, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಪ್ರತಿನಿಧಿ ಶಿವಾನಿ ಶಾಂತಾರಾಮ, ಬಿಜೆಪ ಮಂಡಳ ಅಧ್ಯಕ್ಷ ಸುಬ್ರಾಯ ದೇವಾಡಿಗ, ಪ್ರಮುಖರಾದ ರಾಜೇಶ ನಾಯ್ಕ, ಭಾಸ್ಕರ ದೈಮನೆ, ಮೋಹನ ನಾಯ್ಕ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next