Advertisement

ಸಾಮಾಜಿಕ ಭದ್ರತಾ ಪಿಂಚಣಿಗಳು 72 ಗಂಟೆಗಳಲ್ಲಿ ಫ‌ಲಾನುಭವಿಗಳ ಮನೆ ಬಾಗಿಲಿಗೆ

07:26 PM Mar 30, 2022 | Team Udayavani |

ವಿಧಾನಪರಿಷತ್ತು: ಗ್ರಾಮೀಣ ಭಾಗದ ಜನರು ಅವರಿದ್ದ ಕಡೆ ಹೋಗಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡಲು, ಗ್ರಾಮ ವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗಳ ಜಾರಿ ಬಳಿಕ ಇದೀಗ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು 72 ಗಂಟೆಗಳಲ್ಲಿ ಫ‌ಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್‌. ಅಶೋಕ್‌, ಈ ಹೊಸ ಯೋಜನೆಯ ಬಗ್ಗೆ ಪ್ರಕಟಿಸಿದರು.

“ಹಲೋ ಕಂದಾಯ ಸಚಿವರೇ’ ಎಂದು ಸಹಾಯವಾಣಿಗೆ ಕರೆ ಮಾಡಿದರೆ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿಯ ಪಿಂಚಣಿಗಳನ್ನು ಅರ್ಹ ಫ‌ಲಾನುಭವಿಗಳಿಗೆ 72 ಗಂಟೆಗಳಲ್ಲಿ ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು.ಇದಕ್ಕಾಗಿ ಹೊಸ ಸಾಫ್ಟ್ವೇರ್‌ ತಯಾರಿಸಲಾಗುತ್ತಿದೆ. ಕರ್ನಾಟಕದಲ್ಲಿ ಕಂಟ್ರೋಲ್‌ ರೂಂ ಸ್ಥಾಪಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಗ್ರಾಮ ವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಗಳ ಅನುಭವದ ಆಧಾರದಲ್ಲಿ ಈ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಮೊದಲು ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಪಿಂಚಣಿಗಳಿಗೆ ಅರ್ಜಿ ಸಲ್ಲಿಸಿ ಅರ್ಹತೆ ಪಡೆದುಕೊಳ್ಳಬೇಕಾದರೆ ಆರೇಳು ತಿಂಗಳು ಸಮಯ ಹಿಡಿಯುತ್ತಿತ್ತು. ವಯಸ್ಸು, ಆದಾಯ ಮತ್ತಿತರ ದಾಖಲೆಗಳು ಕಂದಾಯ ಇಲಾಖೆ ಬಳಿ ಇರುತ್ತವೆ. ಆಧಾರ್‌ ಸಂಖ್ಯೆ, ಬಿಪಿಲ್‌ ಕಾರ್ಡ್‌ ಬಳಸಿಕೊಂಡು ಅರ್ಹ ಫ‌ಲಾನುಭವಿಗಳನ್ನು ಪರಿಶೀಲಿಸಿ 72 ಗಂಟೆಗಳಲ್ಲಿ ಅವರ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲಾಗುವುದು ಎಂದು ಆರ್‌. ಅಶೋಕ್‌ ವಿವರಿಸಿದರು.

ಇದನ್ನೂ ಓದಿ:ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ : ಸೊತ್ತು ಸಮೇತ ಆರೋಪಿಯ ಬಂಧನ

Advertisement

24 ಸಾವಿರ ಅರ್ಜಿಗಳ ವಿಲೇವಾರಿ:
ಈವರೆಗೆ 5 ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ನಡೆದಿವೆ. 29,522 ಅರ್ಜಿಗಳು ಬಂದಿದ್ದವು. ಅದರಲ್ಲಿ 24,460 ಅರ್ಜಿಗಳಿಗೆ ಪರಿಹಾರ ದೊರಕಿಸಲಾಗಿದೆ. ಉಳಿದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಮುಖ್ಯಮಂತ್ರಿ ಸಹ ಎರಡು ಕಡೆ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದರು. ಗ್ರಾಮ ವಾಸ್ತವ್ಯ ನಡೆದ ಗ್ರಾಮಗಳ ಸ್ಥಳೀಯ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಲು 1 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಯವರು ಒದಗಿಸಿದ್ದಾರೆ ಎಂದು ಆರ್‌. ಅಶೋಕ್‌ ಇದೇ ವೇಳೆ ಮಾಹಿತಿ ನೀಡಿದರು.

60 ಲಕ್ಷ ರೈತರ ಮನೆಬಾಗಿಲಿಗೆ ದಾಖಲೆಪತ್ರ
ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯಡಿ ಪಹಣಿ, ಅಟ್ಲಾಸ್‌, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಮತ್ತಿತರ ದಾಖಲೆಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ. ಅದರಂತೆ ಈವರೆಗೆ 60 ಲಕ್ಷ ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಜಾತಿ ಪ್ರಮಾಣ ಹೊರತುಪಡಿಸಿ ಉಳಿದ ಕಂದಾಯ ದಾಖಲೆಗಳ ಅವಧಿ 1 ವರ್ಷ ಇರಲಿದೆ. ಈ ದಾಖಲೆಗಳನ್ನು ಒದಗಿಸಲು 15 ಕೋಟಿ ರೂ. ವೆಚ್ಚ ಆಗಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಅವರು ಕಾಂಗ್ರೆಸ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next