Advertisement

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

04:47 PM Mar 23, 2024 | Team Udayavani |

ಕಲಬುರಗಿ: ಪ್ರಸಕ್ತವಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಪತನಗೊಳ್ಳಲಿದೆ ಎಂದು ಸಂಸದರು ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಭವಿಷ್ಯ ನುಡಿದಿದ್ದಾರೆ.

Advertisement

ಶನಿವಾರ ಜಿಲ್ಲೆಯ ಚಿತಾಪುರ ಪಟ್ಟಣದಲ್ಲಿ ನಡೆದ ಬಿಜೆಪಿ ಮಂಡಲ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳುಗಳನ್ನು ಹೇಳುವುದರ ಮೂಲಕ ಮತದಾರರಲ್ಲಿ ಭ್ರಮೆ ಹುಟ್ಟಿಸುತ್ತಿದೆ. ಜನ ಹಿತ ಸಂಪೂರ್ಣವಾಗಿ ಮರೆಯಲಾಗಿದೆ. ಪ್ರಮುಖವಾಗಿ ಎಲ್ಲೆಡೆ ಬಿಜೆಪಿಯ ಪರ ಅಲೆ ಎದ್ದಿದೆ. ಹೀಗಾಗಿ ಸರ್ಕಾರ ಪತನವಾಗುವುದು ಖಚಿತ ಎಂದು ನುಡಿದರು.‌

ಕಾಂಗ್ರೆಸ್ ಪಕ್ಷವು ದುಡ್ಡಿದ್ದವರಿಗೆ ಟಿಕೆಟ್ ಹಂಚಿ ಮಕ್ಕಳನ್ನು ಮತ್ತು ಕುಟುಂಬದ ಸದಸ್ಯರನ್ನು ಅಭ್ಯರ್ಥಿಯನ್ನಾಗಿಸಿದೆ. ಕಾಂಗ್ರೆಸ್ಸಿನ ವಿಪರೀತ ದೌರ್ಜನ್ಯ ನೀತಿಯಿಂದಾಗಿ ಚಿತ್ತಾಪುರ ಸೇರಿದಂತೆ ಎಲ್ಲೆಡೆ ಜನ ಬೇಸತ್ತಿದ್ದಾರೆ. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಚಿತ್ತಾಪುರ ಕ್ಷೇತ್ರದಿಂದ 20000 ಮತಗಳ ಅಂತರದ ಮುನ್ನಡೆ ಸಾಧಿಸಲು ಸಜ್ಜಾಗಬೇಕಾಗಿದೆ ಎಂದರು.

ಕಾಂಗ್ರೆಸ್ ಪಕ್ಷವು ಮಾದಿಗ ಸಮುದಾಯದವರಿಗೆ ಟಿಕೆಟ್ ನೀಡದೆ ಅನ್ಯಾಯವೆಸಗಿದೆ ದಲಿತರ ಅಭಿವೃದ್ಧಿಯ ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸ್ ಸರ್ಕಾರವು ದಲಿತರ ಅಭಿವೃದ್ಧಿಗಾಗಿ ಮೀಸಲಾದ 11000 ಕೋಟಿ ರೂಪಾಯಿಗಳನ್ನು ಗ್ಯಾರಂಟಿಗೆ ನೀಡಿ ದಲಿತರ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.‌

ಜಿಲ್ಲೆಯಲ್ಲಿ ಭೀಮಾ ನದಿ ತೀರದ ಜನರು ಕುಡಿಯಲು ನೀರಿಲ್ಲದೆ ಪರಿತಪಿಸಿ ಹಾಹಾಕಾರವೆದ್ದರೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಕಣ್ಣೆತ್ತಿಯೂ ನೋಡದಿರುವುದು ದುರದೃಷ್ಟಕರ. ಬೆಂಗಳೂರಿನಲ್ಲಿ ಕುಳಿತು ಆಡಳಿತ ನಡೆಸುವ ಜನಪ್ರತಿನಿಧಿಗಳು ನಮಗೆ ಬೇಕಾ ಎಂದು ಪ್ರಶ್ನಿಸಿದರು.

Advertisement

ಜೆಡಿಎಸ್ ಮುಖಂಡ ಶಿವಕುಮಾರ್ ನಾಟಿಕಾರ್ ಅಮರಣಾಂತ ಉಪವಾಸ ನಡೆಸಿದರೂ ಮಾನವೀಯತೆ ದೃಷ್ಟಿಯಿಂದಲಾದರೂ ಅವರನ್ನು ಮಾತನಾಡಿಸಲು ಮುಂದಾಗದ ಪ್ರಿಯಾಂಕ ಖರ್ಗೆಯವರ ಉದ್ಧಟತನ ಅತಿಯಾಗಿ ಬಿಟ್ಟಿದೆ. ಅಭಿವೃದ್ಧಿಯು ಬಿಜೆಪಿಯಿಂದ ಮಾತ್ರ ಆಗುತ್ತಿದ್ದು 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್ ಪ್ರೀಮಿಯರ್ ರೈಲು ಹಾಗೂ ಸಾಪ್ತಾಹಿಕ ರೈಲು, ನಿರುದ್ಯೋಗ ನಿವಾರಣೆಗಾಗಿ 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಬುರಗಿ ಯಲ್ಲಿ ಮೆಗಾ ಜವಳಿ ಪಾರ್ಕ್, ಚಿತ್ತಾಪುರ ಸೇರಿದಂತೆ 120 ಹಳ್ಳಿ- ತಾಂಡಾ ಗಳಿಗೆ ಶುದ್ಧ ಕುಡಿಯುವ ನೀರು, ಪೂರೈಸುವ ಜಲಜೀವನ ಮಿಷನ್ ಯೋಜನೆ ಅನುಷ್ಠಾನ ಮಾಡಿದೆ ಎಂದು ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.

ಮುಂದಿನ 45 ದಿನಗಳಲ್ಲಿ ಮತದಾರರನ್ನು ಜಾಗೃತ ರನ್ನಾಗಿಸಿ ಮೋದಿಯವರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಜಾಧವ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಸಚಿವರಾದ ಬಾಬುರಾವ್ ಚವ್ಹಾಣ, ಚಿತ್ತಾಪುರ ಮಂಡಲದ ಅಧ್ಯಕ್ಷರಾದ್ ರವೀಂದ್ರ ಸಜ್ಜನಶೆಟ್ಟಿ, ಪ್ರಮುಖರಾದ ಶಶಿಕಲಾ ಟೆಂಗಳಿ, ಶರಣಪ್ಪ ತಳವಾರ, ಶಿವಲಿಂಗಪ್ಪ ಒಡೆದ್, ನಾಗರಾಜ್ ಹೂಗಾರ್ ರಾಜು ಕುಲಕರ್ಣಿ ಶರಣಗೌಡ ಭೀಮನಳ್ಳಿ, ಮಲ್ಲಿಕಾರ್ಜುನ್, ಮಲ್ಲಿನಾಥ ಇಂದೂರ್, ನಾಗರಾಜ ಮಂಗಲಗಿ, ಬಸವರಾಜ್ ಬೆಣ್ಣೂರ್, ಶಿವು ಸುಣಗಾರ, ಮಲ್ಲಿಕಾರ್ಜುನ ಪೂಜಾರಿ, ಶಂಕರ ವಕೀಲ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next