Advertisement
ಇವಿಎಂನಲ್ಲಿ ದೋಷ ಇದೆ ಅಂತಾ ಅನುಮಾನ ಇದೆಯಾ ನಿಮಗೆ ?ನೋಡಿ ನಾನು ಸೈನ್ಸ್ ವಿದ್ಯಾರ್ಥಿ, ಅಲ್ಲದೇ ಐಟಿ ಬಿಟಿ ಮಂತ್ರಿ, ಸಂಶಯ ಇಲ್ಲದಿದ್ದರೇ ವಿಜ್ಞಾನ ಮುಂದುವರೆಯುವುದಿಲ್ಲ. ಯಾವುದೇ ತಂತ್ರಜ್ಞಾನ ಪರಿಪೂರ್ಣ ಅಲ್ಲ. ನಾನೇನು ಹೇಳುತ್ತೇನೆಂದರೆ, ಏನಾದರೂ ದೋಷಗಳಿದ್ದರೆ ಅದನ್ನು ಸರಿಪಡಿಸೋಣ. ಬೆಂಗಳೂರು ವಿಶ್ವದಲ್ಲಿಯೇ ತಂತ್ರಜ್ಞಾನದ ರಾಜಧಾನಿ ಅಂತ ಹೆಸರು ಪಡೆದುಕೊಂಡಿದೆ. ಇಲ್ಲಿ ಸಂಶಯ ನಿವಾರಣೆ ಮಾಡದೇ ಹೋದರೆ ಮತ್ತೆಲ್ಲಿ ಮಾಡುವುದು.
ರಾಜಕೀಯ ಪಕ್ಷಗಳಿಗೆ ತಂತ್ರ ಜ್ಞಾನದ ಪರಿಣತಿ ಇರುವುದಿಲ್ಲ. ವಿಜ್ಞಾನಿಗಳಿಗೆ, ತಂತ್ರಜ್ಞರು, ಸಂಶೋಧನಾ ಕೇಂದ್ರಗಳಿಗೆ ಅವಕಾಶ ಕೊಡಿ,ನವೋದ್ಯಮಿಗಳಿಗೆ ಅವಕಾಶ ಕೊಡಿ, ರಾಜಕೀಯ ಪಕ್ಷಗಳ ಬದಲು, ತಾಂತ್ರಿಕ ಪರಿಣಿತರಿಗೆ ಅವಕಾಶ ಕಲ್ಪಿಸಿಕೊಡಿ. ಗುಜರಾತ್ ಚುನಾವಣೆಯಲ್ಲಿ ಇವಿಎಂ ದೋಷ ಇತ್ತು ಅಂತೀರಾ ?
ಜನರಿಗೆ ಇವಿಎಂಗಳ ಬಗ್ಗೆ ಸಂಶಯ ಬಂದಿದೆ. ನಾನು ಇವಿಎಂ ಬಿಟ್ಟು ಬ್ಯಾಲೆಟ್ ಪೇಪರ್ ಬಳಸಿ ಅಂತ ಹೇಳುತ್ತಿಲ್ಲ. ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದ್ದಾಗ ಅವರ ಸಂಶಯ ನಿವಾರಣೆ ಮಾಡುವುದು ನಮ್ಮ ಕರ್ತವ್ಯ. ನಾನೂ ಇವಿಎಂಗಳನ್ನು ಬಳಸಿರುವ ಚುನಾವಣೆಯಲ್ಲಿಯೇ ಗೆದ್ದಿದ್ದೇನೆ. ಯುಪಿ ಚುನಾವಣೆ ನಂತರ ಸಂಶಯ ಹೆಚ್ಚಾಗಿ ಅದನ್ನು ನಿವಾರಿಸಬೇಕು.
Related Articles
ನಾನು ರಾಜ್ಯದ ಜವಾಬ್ದಾರಿಯುತ ಸಚಿವನಾಗಿ ಪತ್ರ ಬರೆದಿದ್ದೇನೆ. ಆಯೋಗ ಎಸ್.ಆರ್. ನೋ ಅಂತ ಉತ್ತರ ಕೊಡಬೇಕು. ಉತ್ತರ ಕೊಡದಿದ್ದರೆ ಏನ್ ಮಾಡಲಿಕ್ಕಾಗುತ್ತದೆ. ನಾನು ಯಾರಿಗೆ ಅವಕಾಶ ಕೊಡಬೇಕು ಅಂತ ಪತ್ರದಲ್ಲಿ ಬರೆದಿದ್ದೇನೆ. ಅವಕಾಶ ಕೊಡಲ್ಲಾ ಅಂದ್ರೆ ಅವರಿಗೆ ಬಿಟ್ಟದ್ದು. ಸಂವಿಧಾನಕ್ಕಿಂತ ಯಾವ ಸಂಸ್ಥೆಯೂ ಮೇಲಲ್ಲಾ.
Advertisement
ಕಾಂಗ್ರೆಸ್‌ನವರಿಗೆ ಇವಿಎಂ ಬಗ್ಗೆ ಭಯ ಹೆಚ್ಚಾಗಿದೆಯಾ ?ನಮಗ್ಯಾಕ್ ಭಯಾ, ಉತ್ತಮ ಕೆಲಸ ಮಾಡಿದರೆ ಜನ ನಮ್ಮನ್ನು ಆಯ್ಕೆ ಮಾಡುತ್ತಾರೆ. ಇವಿಎಂ ಉತ್ಪಾದನೆ ಬಗ್ಗೆ ಚುನಾವಣಾ ಆಯೋಗ, ಬಿಇಎಲ್, ಇಸಿಐಎಲ್ ಉತ್ತರದಲ್ಲಿ ಸಾಕಷ್ಟು ವ್ಯತ್ಯಾಸ ಇದೆ. 90 ರ ದಶಕದಲ್ಲಿ ಉತ್ಪಾದನೆಯಾದ ಇವಿಎಂಗಳ ಪರಿಸ್ಥಿತಿ ಏನಾಗಿದೆ ಅನ್ನೋದು ಆಯೋಗಕ್ಕೆ ಗೊತ್ತಿಲ್ಲ. ಇವಿಎಂ ಬಗ್ಗೆ ಭಯ ಇದೆ ಅಂತ ನಿಮ್ಮ ಅಧ್ಯಕ್ಷರೇ ಹೇಳಿದ್ದಾರಲ್ಲಾ ?
ಇದೇ ಬಿಜೆಪಿಯ ಕೇಶವರಾವ್ ಅಂತ “ಇವಿಎಂ ಥೆÅಟ್ ಟು ಡೆಮಾಕ್ರಸಿ’ ಅಂತ ಬುಕ್ ಬರೆದಿದ್ದಾರೆ. ಅದಕ್ಕೆ ಎಲ್.ಕೆ. ಅಡ್ವಾಣಿಯೇ ಮುನ್ನುಡಿ ಬರೆದಿದ್ದಾರೆ. ಅವಾಗ ಇವಿಎಂ ಚೆನ್ನಾಗಿತ್ತಾ. ಅವಾಗ ನಾವೇನಾದ್ರೂ ಹೇಳಿದ್ವಾ. ಅವರು ಬುಕ್ ಬರೆದಾಗ ಯಾರೂ ಏನೂ ಮಾತಾಡಲ್ಲಾ. ನಾವು ಕೇಳಿದ್ರೆ ಅಂಜಿಕೆ ಅಂತಾ ಕೇಳಿದ್ರೆ ಏನ್ ಹೇಳ್ಳೋದು. ಚುನಾವಣಾ ಆಯೋಗ ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆಯಾ ?
ಆಯೋಗ ಸಂವಿಧಾನಿಕ ಸಂಸ್ಥೆ ನಾವು ಸಂವಿಧಾನಿಕ ಸಂಸ್ಥೆಗಳನ್ನು ಗೌರವಿಸುತ್ತೇವೆ. ಆದರೆ, ಇತ್ತೀಚಿನ ಅವರ ನಡವಳಿಕೆ ಸಂಶಯಕ್ಕೆ ಕಾರಣವಾಗುತ್ತದೆ. ಗುಜರಾತ್ ಚುನಾವಣೆಯಲ್ಲಿ ಮತದಾನದ ದಿನ ಪ್ರಧಾನಿ ಮೋದಿ ರ್ಯಾಲಿ ಮಾಡಿದ್ದು, ಸಂಪೂರ್ಣ ನೀತಿ ಸಂಹಿತೆ ಉಲ್ಲಂಘನೆ. ಅವರ ವಿರುದ್ಧ ಪ್ರಕರಣ ದಾಖಲು ಮಾಡುವ ಬದಲು ಉಳಿದ ಪ್ರಕರಣಗಳನ್ನೂ ಕೈ ಬಿಟ್ಟರು. ದೂರು ಕೊಟ್ಟರೂ ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಇಂದಿರಾ ಗಾಂಧಿ ಇದೇ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದ್ದರು. ಈಗ ಏನೂ ಕ್ರಮ ಕೈಗೊಳ್ಳಲ್ಲಾ ಅಂದ್ರೆ ಜನರ ವಿವೇಚನೆಗೆ ಬಿಡೋಣ. ಕರ್ನಾಟಕದ ಚುನಾವಣೆಯಲ್ಲಿ ಇವಿಎಂ ಬಳಕೆ ಆಗಬೇಕಾ, ಬ್ಯಾಲೆಟ್ ಪೇಪರ್ ಬಳಸಬೇಕಾ ?
ನಾವು ತೀರ್ಮಾನ ಮಾಡುತ್ತಿಲ್ಲ. ಲೋಪಗಳನ್ನು ಸರಿಪಡಿಸೋಣ, ಸರಿಯಾಗದಿದ್ದರೇ ಬ್ಯಾಲೆಟ್ ಪೇಪರ್ ಬಳಸಬಹುದು. ನಾನು ಐಟಿ ಬಿಟಿ ಮಂತ್ರಿಯಾಗಿ ಇವಿಎಂ ಬೇಡ ಅಂತ ಹೇಳುವುದಿಲ್ಲ. ಪಕ್ಷದ ಅಧ್ಯಕ್ಷರು ಇವಿಎಂ ಬೇಡ ಅಂತಿದ್ದಾರಲ್ಲಾ ?
ಅವರು ಪಕ್ಷದ ಅಧ್ಯಕ್ಷರಾಗಿ ಹೇಳಿರಬಹುದು.ನಾನು ತಂತ್ರಜ್ಞಾನದ ಮಂತ್ರಿಯಾಗಿ ಹಾಗೆ ಹೇಳುವುದಿಲ್ಲ. ಯಾವುದೇ ಸಂಶೋಧನೆ ಆದರೂ, ಅದರ ಬಗ್ಗೆ ಸಂಪೂರ್ಣ ಗ್ಯಾರೆಂಟಿ ಕೊಡಲು ಆಗುವುದಿಲ್ಲ. ಸ್ಮಾರ್ಟ್ ಫೋನ್ ಎಷ್ಟೆ ಅಡ್ವಾನ್ಸ್ ಆಗಿದ್ದರೂ, ವೈರಸ್ ಅಟ್ಯಾಕ್ ಆಗುವುದಿಲ್ಲವಾ ? ಎಷ್ಟು ಇವಿಎಂಗಳು ದೇಶದಲ್ಲಿ ಉತ್ಪಾದನೆ ಆಗುತ್ತಿವೆ. ಅವುಗಳಿಗೆ ಬಳಸುವ ಚಿಪ್ಸ್ ಎಲ್ಲಿ ಉತ್ಪಾದನೆ ಆಗುತ್ತಿವೆ ಎನ್ನುವ ಅನುಮಾನವೂ ಇದೆ. ಇವಿಎಂ ಬೇಡ ಅಂದ್ರೆ ಮತ್ತೆ ಬೋಗಸ್ ಓಟಿಂಗ್ ಅವಕಾಶ ಕೊಟ್ಟಂಗೆ ಆಗಲ್ವಾ ?
ಇವಿಎಂ ಬಂದ ಮೇಲೆ ಸಾಕಷ್ಟು ಅನುಕೂಲ ಆಗಿದೆ. ಸಮಯ ಉಳಿತಾಯ, ಆರ್ಥಿಕ ವೆಚ್ಚವೂ ಕಡಿಮೆ ಆಗಿದೆ. ಆದರೆ, ಅಮೆರಿಕಾ, ಫ್ರಾನ್ಸ್, ಜರ್ಮನಿ ನಮಗಿಂತ ತಾಂತ್ರಿಕವಾಗಿ ಮುಂದುವರೆದಿದ್ದಾರೆ. ಲೋಪದೋಷಗಳಿದ್ದಾಗ ಅವರೂ ಪ್ರಯೋಗ ಮಾಡಿ ಬಿಟ್ಟಿದ್ದಾರೆ. 6 ಕೋಟಿ ಜನರ ಭವಿಷ್ಯ ನಿರ್ಧಾರ ಮಾಡುವಾಗ ಒಂದು ದಿನ ಪರೀಕ್ಷೆ ಮಾಡಿದರೆ ತಪ್ಪೇನು ? – ಶಂಕರ ಪಾಗೋಜಿ