ಬೀದರ್: ಬೆಂಗಳೂರಿಗೆ 10, ಇತರ ಜಿಲ್ಲೆಗಳಿಗೆ 15 ಪಶು ಶಸ್ತ್ರಚಿಕಿತ್ಸಾ ವಾಹನ ಸೌಲಭ್ಯ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಅವರಿಂದ ಒಪ್ಪಿಗೆ ಸಿಕ್ಕಿದೆ ಎಂದು ಪಶು ಸಂಗೊಪನೆ ಸಚಿವ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಚರ್ಚಿಸಿದ್ದೇನೆ. ಆರಂಭದಲ್ಲಿ 15 ವಾಹಗಳನ್ನು ಲೋಕಾರ್ಪಣೆ ಮಾಡಿಲಾಗಿದ್ದು, ಮುಂದಿನ ಹಂತದಲ್ಲಿ 25 ವಾಹನಗಳನ್ನು ಸೇವೆಗೆ ಸಿದ್ಧಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದ 15 ಜಿಲ್ಲೆಗಳಿಗೆ ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನ ಸೌಲಭ್ಯ ನೀಡಲಾಗಿದ್ದು, ಮುಂದಿನ ಹಂತವಾಗಿ ಇನ್ನೂ 25 ಜಿಲ್ಲೆಗಳಿಗೆ ಈ ವಾಹನಗಳನ್ನು ವಿಸ್ತರಿಸಲಾಗುವುದು. ಬೆಂಗಳೂರಿಗೆ 10 ಹಾಗೂ ಇತರೆ ಜಿಲ್ಲೆಗಳಿಗೆ 15 ಸೇರಿದಂತೆ ಒಟ್ಟು 25 ಪಶು ಶಸ್ತ್ರಚಿಕಿತ್ಸಾ ವಾಹನಗಳನ್ನು ನೀಡಲು ಸಿಎಂ ಒಪ್ಪಿಕೊಂಡಿದ್ದಾರೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
ಪಶುಸಂಗೋಪನೆ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಜಾನುವಾರು ರಕ್ಷಣೆ ಮತ್ತು ಅವುಗಳ ಆರೋಗ್ಯ ಕಾಪಾಡುವಲ್ಲಿ ವ್ಯವಸ್ಥಿತವಾದ ಆರೋಗ್ಯ ಸೇವೆ ಒದಗಿಸುವ ಕನಸಿತ್ತು. ಪ್ರವಾಸದ ವೇಳೆ ಬೇರೆಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದಾಗ ರೈತರೊಂದಿಗೆ, ಜಾನುವಾರು ಸಾಕಣೆದಾರರೊಂದಿಗೆ ಮಾತುಕತೆ ನಡೆಸಿದ ಸಮಯದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ಸವಾಲಾಗಿದ್ದು ಗಮನಕ್ಕೆ ಬಂದಿತು. ಅಲ್ಲದೇ ಗ್ರಾಮಾಂತರ ಪ್ರದೇಶದಲ್ಲಿ ರೈತರು ತಮ್ಮ ಜಾನುವಾರುಗಳ ಆರೋಗ್ಯ ತಪಾಸಣೆಗಾಗಿ ಬಹಳಷ್ಟು ದೂರ ಕ್ರಮಿಸಬೇಕಾದ ಅನಿವಾರ್ಯತೆ ಇರುವುದು ತಿಳಿದು ಬಂತು. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಸುಸಜ್ಜಿತವಾದ, ಎಲ್ಲಾ ಸೌಕರ್ಯವನ್ನು ಹೊಂದಿರುವ, ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವ ವಾಹನ ಪರಿಚಯಿಸಬೇಕೆಂದು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.
ಕೆಆರ್ ಎಸ್, ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಯಡಿಯೂರಪ್ಪ
ತುರ್ತು ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯವಾಣಿ 1962ಕ್ಕೆ ಕರೆ ಮಾಡಿದರೆ, ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನ ರೈತರ ಮನೆ ಬಾಗಿಲಿಗೆ ತೆರಳುತ್ತದೆ, ಇದರಿಂದ ಸಕಾಲದಲ್ಲಿ ಪಶುಗಳಿಗೆ ಚಿಕಿತ್ಸೆ ಸಿಗುತ್ತದೆ. ವಿಷಪ್ರಾಶನ, ಪ್ರಸವಕ್ಕೆ ಸಂಭಂಧಿಸಿದ ತೊಂದರೆಗಳು, ಹೊಟ್ಟೆ ಉಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆಮುರಿತ, ಬೇಸಿಯೋಸಿನ್, ಆಂಥ್ರಾಕ್ಸ್, ಚಪ್ಪೆರೋಗ, ಗಳಲೇ ರೋಗ, ಹಾಲುಜ್ವರ, ಕೆಚ್ಚಲು ಬಾವು, ವಿವಿಧ ರೋಗೊದ್ರೇಕಗಳು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಜಾನುವರುಗಳನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆ ಪಡೆಯಬಹುದು.
ಮೂಕರೋಧನೆ ತಪ್ಪಿಸಲು ರೈತರ ಮನೆ ಬಾಗಿಲಿಗೆ ತೆರಳಿ ತಜ್ಞ ಪಶುವೈದ್ಯರು ಹಾಗೂ ಸುಸಜ್ಜಿತ ಪಶು ಚಿಕಿತ್ಸಾ ವಾಹನವು ದನ, ಎಮ್ಮೆ, ಕುರಿ, ಮೇಕೆ, ಹಾಗೂ ಇನ್ನಿತರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟವನ್ನು ತಪ್ಪಿಸುವುದು ಇದರ ಗುರಿಯಾಗಿದೆ.
ಈ ತರಹದ ಎಲ್ಲ ರೋಗಗಳಿಗೆ ವಾಹನದಲ್ಲಿ ಇದ್ದ ತಜ್ಞ ಪಶುವೈದ್ಯರು ಚಿಕಿತ್ಸೆಗಳನ್ನು ನೀಡಲಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.