Advertisement
ಹುಬ್ಬಳ್ಳಿ: ಮುಖ್ಯಮಂತ್ರಿ ಆಗುವವರ ಪಟ್ಟಿಯಲ್ಲಿ ರಾರಾಜಿಸಿ ಕೊನೆಗೆ ಸಚಿವ ಸ್ಥಾನ ಪಡೆಯದೆ ಶಾಸಕ ಅರವಿಂದ ಬೆಲ್ಲದ ಅವರು ರಾಜಕೀಯವಾಗಿ ತೀವ್ರ ಹಿನ್ನಡೆ ಜತೆಗೆ, ಹಲವು ಹಿರಿಯರ ಕೆಂಗಣ್ಣಿಗೂ ಗುರಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದೇ ಲಾಬಿಯ ಗೋಜಿಗೂ ಹೋಗದೆ, ಶಂಕರ ಪಾಟೀಲ ಮುನೇನಕೊಪ್ಪ ಅವರು ಸಚಿವ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
Related Articles
Advertisement
ರಾಜ್ಯಮಟ್ಟದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಹೇಳಿಕೆಗಳ ಜತೆಗೆ ಸ್ಥಳೀಯವಾಗಿಯೂ ಹಿರಿಯ ನಾಯಕರನ್ನು ಬದಿಗಿರಿಸುವ ನಿಟ್ಟಿನಲ್ಲಿ ಸಾಗಿದ್ದು, ಸಚಿವ ಸ್ಥಾನಕ್ಕೆ ಅವಕಾಶ ದೊರೆಯದಂತೆ ಮಾಡಿತೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಸ್ಥಳೀಯವಾಗಿಯೂ ಪಕ್ಷದ ಒಲವು ಪಡೆಯದೆ, ಹೈಕಮಾಂಡ್ ಮಟ್ಟದಲ್ಲೂ ಮಹತ್ವದ ಬಲ ಹೊಂದದೆ ಏನೋ ಮಾಡಲು ಹೋಗಿ ಇನ್ನೇನೋ ಆದ ಸ್ಥಿತಿಗೆ ಬೆಲ್ಲದ ಸಿಲುಕಿದರೆನ್ನಲಾಗಿದೆ.
ಉತ್ತಮ ಶಿಕ್ಷಣ ಪಡೆದವರು, ಯಶಸ್ವಿ ಉದ್ಯಮಿಯೂ ಆಗಿರುವ ಅರವಿಂದ ಬೆಲ್ಲದ ಅವರು ಅಗತ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ಬಿಂಬಿಸಿಕೊಂಡು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರೆ?, ಭವಿಷ್ಯದಲ್ಲಿ ರಾಜಕೀಯವಾಗಿ ಹಲವು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆಯೇ ಎಂಬುದು ಹಲವರ ಅನಿಸಿಕೆಯಾಗಿದೆ.
“ರಾಜಕೀಯದಲ್ಲಿ ತಾಳ್ಮೆ ಇರಬೇಕು, ತರಾತುರಿಗೆ ಮುಂದಾದರೆ, ಅಧಿಕಾರಕ್ಕಾಗಿ ಏನೇನೋ ಮಾಡಲು ಹೋದರೆ, ರಾಜಕೀಯ ಭವಿಷ್ಯವೇ ಮಂಕಾಗುವ ಸಾಧ್ಯತೆ ಇದೆ’ ಎಂಬ ಬಿಜೆಪಿ ಹಿರಿಯ ನಾಯಕರೊಬ್ಬರ ಅನಿಸಿಕೆ ಶಾಸಕ ಅರವಿಂದ ಬೆಲ್ಲದ ಅವರಿಗೆ ಅಕ್ಷರಶಃ ಅನ್ವಯವಾದಂತೆ ಭಾಸವಾಗುತ್ತಿದೆ. ತಾಳ್ಮೆ ತಂದು ಕೊಟ್ಟ ಸಚಿವ ಸ್ಥಾನ: ಶಾಸಕ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿ, ಸಚಿವ ಸ್ಥಾನಕ್ಕೆ ಓಡಾಟ ಅರ್ಭಟದೊಂದಿಗೆ ಮಾಧ್ಯಮಗಳಲ್ಲಿ, ಜನರ ಚರ್ಚೆಯಲ್ಲಿ ಸುಳಿದಾಡಿ ಏನೊಂದು ಸಿಗದೆ ಮೌನಕ್ಕೆ ಜಾರಿದ್ದರೆ, ಸಚಿವ ಸ್ಥಾನ ವಿಚಾರದಲ್ಲಿ ಏನೊಂದು ಹೇಳಿಕೆ ನೀಡದೆ ಮೌನವಾಗಿಯೇ ಇದ್ದ, ಇತರರಂತೆ ಲಾಬಿಗೂ ಮುಂದಾಗದೆ ಸಚಿವ ಸ್ಥಾನ ಪಡೆಯುವಲ್ಲಿ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಯಶಸ್ವಿಯಾಗಿದ್ದು, ಸಂತಸದ ನಗೆ ಬೀರಿದ್ದಾರೆ.
ಶಂಕರ ಪಾಟೀಲ ಮುನೇನಕೊಪ್ಪ ಅವರು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಯಾಗಿ, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೂ, ಸಚಿವ ಸ್ಥಾನಕ್ಕೆ ಓಡಾಡಲಿಲ್ಲ, ಗದ್ದಲ ಮಾಡಲಿಲ್ಲ. ಅರವಿಂದ ಬೆಲ್ಲದ ಅವರು ತಾವಾಗಿಯೇ ಮಾಡಿಕೊಂಡ ರಾಜಕೀಯ ಹಿನ್ನಡೆ ಸಹಜವಾಗಿಯೇ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ವರವಾಗಿ ಪರಿಣಮಿಸಿ ಇದ್ದಲ್ಲಿಗೆ ಸಚಿವ ಸ್ಥಾನ ತಂದು ಕೊಟ್ಟಿದೆ ಎನ್ನುವುದರ ಜತೆಗೆ, ಹಿರಿಯ ನಾಯಕರೊಂದಿಗಿನ ಉತ್ತಮ ಸಂಬಂಧ ಇದಕ್ಕೆ ತನ್ನದೇ ಬಲ ನೀಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.