Advertisement

ಚಿಕ್ಕಬಳ್ಳಾಪುರದಲ್ಲಿ ಬೃಹತ್ ಆರೋಗ್ಯ ಮೇಳ : ಭಾಗವಹಿಸಿಸಲು ಸಚಿವ ಡಾ.ಕೆ.ಸುಧಾಕರ್ ಕರೆ

04:28 PM May 04, 2022 | Team Udayavani |

ಚಿಕ್ಕಬಳ್ಳಾಪುರ: ಇದೇ 14 ಮತ್ತು 15 ರಂದು ಚಿಕ್ಕಬಳ್ಳಾಪುರ ನಗರದ ಶ್ರೀ ಆದಿ ಚುಂಚನಗಿರಿ ಮಠದ ಎಸ್.ಜೆ.ಸಿ.ಐ.ಟಿ ಕಾಲೇಜಿನಲ್ಲಿ ನಡೆಯಲಿರುವ ಉಚಿತ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ಆರೋಗ್ಯ ಚಿಕಿತ್ಸೆ ಮತ್ತು ಔಷಧೋಪಾಚಾರ ಸೇವೆ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

Advertisement

ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಮಟ್ಟದ ಉಚಿತ ಬೃಹತ್ ಆರೋಗ್ಯ ಮೇಳ ಆಯೋಜನೆಯ ಪೂರ್ವ ಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳು ಮತ್ತು ಸಲಹೆಗಳನ್ನು ನೀಡಿ ಮಾತನಾಡಿದರು.

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 3.5 ಲಕ್ಷ ಜನಸಂಖ್ಯೆ ಇದ್ದು, ಈ ಪೈಕಿ 1.5 ಲಕ್ಷ ಜನರನ್ನು ಮೇಳಕ್ಕೆ ನೋಂದಾಯಿಸಬೇಕು. ಅವರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಿಸಿ ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯ ಮೇರೆಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಸಕಲ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಅಗತ್ಯಕ್ರಮ ಕೈಗೊಳ್ಳಬೇಕು. ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರವನ್ನು ಹೊರತುಪಡಿಸಿ ಇತರ ಕ್ಷೇತ್ರಗಳಿಂದ ಯಾವುದೇ ವ್ಯಕ್ತಿ ಆರೋಗ್ಯ ಸೇವೆ, ಶಸ್ತ್ರ ಚಿಕಿತ್ಸೆ ಬಯಸಿ ಆರೋಗ್ಯ ಮೇಳಕ್ಕೆ ಆಗಮಿಸಿದರೆ, ಭೌತಿಕ ನೋಂದಣಿ ಮಾಡಿ ಅವರೆಲ್ಲರಿಗೂ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಬೇಕು. ಯಾವುದೇ ಕಾರಣಕ್ಕೂ ಆರೋಗ್ಯ ಸೇವೆಯನ್ನು ಯಾರಿಗೂ ಕೂಡ ನಿರಾಕರಿಸುವಂತಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ 100 ಕ್ಕೂ ಹೆಚ್ಚು ಸಂಸ್ಥೆಗಳಿಂದ ಸುಮಾರು 1,500 ಕ್ಕೂ ಹೆಚ್ಚು ವೈದ್ಯರು, 1,000 ಕ್ಕೂ ಹೆಚ್ಚು ಪ್ರಯೋಗಾಲಯ ತಾಂತ್ರಿಕ ತಜ್ಞರು, ಆರೋಗ್ಯ ಸೇವೆ ನೀಡಲು ಮೇಳದಲ್ಲಿ ಅಂದು ಭಾಗವಹಿಸುತ್ತಿದ್ದು, ಎಲ್ಲರು ಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳುವಂತೆ ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್, ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next