ಹಾವೇರಿ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಅನಿರೀಕ್ಷಿತವಾಗಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಪಕ್ಕದಲ್ಲಿಯೇ ಕುಳಿತು ಶಿಕ್ಷಕರ ಪಾಠ ಆಲಿಸಿ, ಬಳಿಕ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.
ಸೋಮವಾರ ಧಾರವಾಡಕ್ಕೆ ಹೋಗುವ ಮಾರ್ಗಮಧ್ಯೆ ಜಿಲ್ಲೆಯ ಬಂಕಾಪುರ ಶಾಲೆಗೆ ಭೇಟಿ ಮಾಡಲು ಸಚಿವರು ನಿರ್ಧರಿಸಿದ್ದರು. ಈ ಪೂರ್ವನಿರ್ಧಾರವನ್ನು ಬದಲಾಯಿಸಿದ ಸಚಿವರು, ನೆಲೊಗಲ್ಲ ಗ್ರಾಮದ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಆಗ ಶಾಲೆಯಲ್ಲಿ 10ನೇ ತರಗತಿಯಲ್ಲಿಗಣಿತ ಪಾಠ ನಡೆಯುತ್ತಿತ್ತು. ವಿದ್ಯಾರ್ಥಿಗಳ ಪಕ್ಕದಲ್ಲಿಯೇ ಕುಳಿತ ಕೆಲ ನಿಮಿಷಗಳ ಕಾಲ ಸಚಿವರು ಪಾಠ ಆಲಿಸಿದರು. ಬಳಿಕ ಮಕ್ಕಳಿಂದಲೇ ಗಣಿತ ವಿಷಯದ ಪಾಠ ಮಾಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಂಜನೇಯ ಎಂಬ ಬಡ ವಿದ್ಯಾರ್ಥಿ ಛಲದಿಂದ ಓದಿ ಉನ್ನತ ಸ್ಥಾನಕ್ಕೇರಿದ ಬಗ್ಗೆ ಸಣ್ಣ ಕಥೆ ಸಹ ಹೇಳಿ ಸಚಿವರು ಮಕ್ಕಳನ್ನು ಹುರಿದುಂಬಿಸಿದರು. ಕಡುಬಡತನದಿಂದ ಬಂದ ವಿದ್ಯಾರ್ಥಿ ಆಂಜನೇಯ ಎಂಬುವನು ಛಲದಿಂದ 10ನೇ ತರಗತಿಯಲ್ಲಿ ಶೇ.91ರಷ್ಟು ಅಂಕ ಪಡೆದು, ಮುಂದೆ ಐಐಟಿ ಪರೀಕ್ಷೆ ಬರೆದು ಈಗ ಉನ್ನತ ಸ್ಥಾನದಲ್ಲಿರುವುದನ್ನು ಮಕ್ಕಳಿಗೆ ತಿಳಿಸಿದ ಸಚಿವರು, ಓದನ್ನು ಒಂದು ವ್ರತವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು. ಮಕ್ಕಳೊಂದಿಗೆ ಕೆಲಹೊತ್ತು ಚರ್ಚೆ, ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಚಿವರು, ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯ ಕಷ್ಟವಾಗಿದೆಯೇ? ಮನೆಯಲ್ಲಿ ವಿದ್ಯುತ್ ಸಮಸ್ಯೆ ಇದೆಯೇ? ಯಾವುದೇ ಸಮಸ್ಯೆ ಇದ್ದರೂ ತಿಳಿಸಿ. ಎಲ್ಲ ಸೌಲಭ್ಯ ಒದಗಿಸಿಕೊಡುತ್ತೇವೆ ಎಂದು ಮಕ್ಕಳಿಗೆ ಕೇಳಿದರು. ಮಕ್ಕಳು ಪರೀಕ್ಷೆಗೆ ಹೆದರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಮಕ್ಕಳ ಶಿಕ್ಷಣದ ಕುರಿತು ಶಿಕ್ಷಕರು ಕೈಗೊಂಡ ಕ್ರಮಗಳ ಕುರಿತು ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದರು.
ಹತ್ತನೇ ತರಗತಿಯ ಮಕ್ಕಳು ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು ಶಿಕ್ಷಕರ ಮೊಬೈಲ್‌ಗೆ ಮಿಸ್‌ಕಾಲ್ ಕೊಡಬೇಕು. ಮತ್ತು ಶಿಕ್ಷಕರು ಕೆಲ ಹೊತ್ತು ಬಿಟ್ಟು ಕರೆ ಮಾಡಿ ವಿದ್ಯಾರ್ಥಿ ಎದ್ದು ಓದುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಯೋಜನೆ ಮಾಡಿಕೊಂಡಿರುವ ಬಗ್ಗೆ ಶಿಕ್ಷಕರು ಸಚಿವರಲ್ಲಿ ಹಂಚಿಕೊಂಡರು. ಪಾಲಕರಿಗೆ ಕರೆದು ತಿಳಿವಳಿಕೆ ಕೊಡಲು ಸಹ ಸಚಿವರು ಸಲಹೆ ನೀಡಿದರು. ಶಾಸಕ ನೆಹರು ಓಲೇಕಾರ ಈ ಸಂದರ್ಭದಲ್ಲಿದ್ದರು.