Advertisement

ಬೀಚ್‌ ಅಭಿವೃದ್ಧಿ ತ್ವರಿತಗೊಳಿಸಲು ಸಚಿವ ರೈ ಸೂಚನೆ

10:38 AM Apr 01, 2017 | Harsha Rao |

ಮಂಗಳೂರು: ದ.ಕ. ಜಿಲ್ಲೆಯ 5 ಬೀಚ್‌ಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. 

ಜಿಲ್ಲೆಯ 5 ಬೀಚ್‌ಗಳ ಅಭಿವೃದ್ಧಿಗೆ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಬೇಕೆಂಬ ಉದ್ದೇಶದಿಂದ ಕೆಆರ್‌ಐಡಿಎಲ್‌ (ಲ್ಯಾಂಡ್‌ ಆರ್ಮಿ) ಸಂಸ್ಥೆಗೆ ಕಾಮಗಾರಿ ವಹಿಸಲಾಗಿದೆ. ಆದರೆ ಈ ಸಂಸ್ಥೆಯು ಯೋಜನೆ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಎಲ್ಲ ಬೀಚ್‌ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಬೇಕು. ಈ ಬಗ್ಗೆ ಸ್ಥಳೀಯವಾಗಿ ಏನೇ ಸಮಸ್ಯೆ ಇದ್ದರೂ ಸಂಬಂಧಪಟ್ಟ ಶಾಸಕರ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಬೇಕು ಎಂದು ಸಚಿವರು ಕೆಆರ್‌ಐಡಿಎಲ್‌ ಅಧಿಕಾರಿಗಳಿಗೆ ಸೂಚಿಸಿದರು.

ಶುದ್ಧ ನೀರು ಘಟಕ
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅಳವಡಿಸಿರುವ ಶುದ್ಧ ನೀರು ಘಟಕ ಬಹುತೇಕ ಕಡೆ ಸಮರ್ಪಕವಾಗಿ ಕಾರ್ಯಾಚರಿಸುತ್ತಿಲ್ಲ. ಘಟಕಗಳು ಮಂಜೂರುಗೊಂಡು ಒಂದು ವರ್ಷ ಕಳೆದಿದ್ದರೂ ಇನ್ನೂ ಹಲವೆಡೆ ಅನುಷ್ಠಾನಗೊಂಡಿಲ್ಲ ಎಂದು ಸಚಿವ ರಮಾನಾಥ ರೈ ಅವರು ತಿಳಿಸಿದರು.

Advertisement

ಜಿಲ್ಲೆಯಲ್ಲಿ 65 ಶುದ್ಧನೀರು ಘಟಕ ಮಂಜೂರುಗೊಂಡಿದ್ದು, ಈ ಪೈಕಿ 38 ಕಾರ್ಯಾಚರಿಸುತ್ತಿದೆ ಎಂದು ಕೆಆರ್‌ಐಡಿಎಲ್‌ ಅಧಿಕಾರಿ ಮಾಹಿತಿ ನೀಡಿದರು. ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ ಅಂಬೇಡ್ಕರ್‌ ಭವನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವರು ನಿರ್ದೇಶ ನೀಡಿದರು.

ವಿಮಾನ ನಿಲ್ದಾಣ ರಸ್ತೆ: ಶೀಘ್ರ ಕಾಮಗಾರಿ ನಡೆಸಿ
ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾಗಿರುವ ಮಂಗಳೂರು ವಿಮಾನ ನಿಲ್ದಾಣ ರಸ್ತೆಯ ಚತುಷ್ಪಥ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು. ಈ ರಸ್ತೆಯಲ್ಲಿ ಒಂದು ಸೇತುವೆ ಹಾಗೂ ಒಂದು ರೈಲ್ವೇ ಕೆಳ ಸೇತುವೆ ಬರಲಿದೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ರಸ್ತೆ ಚತುಷ್ಟಥ ಕಾಮಗಾರಿ ಕೈಗೆತ್ತಿ, ಎರಡನೇ ಹಂತದಲ್ಲಿ ಸೇತುವೆ ಕಾಮಗಾರಿ ನಡೆಸುವಂತೆ ಸಚಿವರು ತಿಳಿಸಿದರು.

1.56 ಕೋ.ರೂ. ಪರಿಷ್ಕೃತ ಅಂದಾಜು ಪಟ್ಟಿ
ಮಂಗಳೂರು ನಗರದ ಪುರಭವನ ಬಳಿ ಸ್ಕೈವಾಕರನ್ನು ನಿರ್ಮಿಸಲು 89 ಲಕ್ಷ ರೂ. ಅಂದಾಜು ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಕೈ ವಾಕರನ್ನು ವಿಶಾಲವಾಗಿ ನಿರ್ಮಿಸಲು 1.56 ಕೋಟಿ ರೂ. ವೆಚ್ಚದ ಪರಿಷ್ಕೃತ ಅಂದಾಜು 
ಪಟ್ಟಿಗೆ ಸರಕಾರದ ಅನುಮೋದನೆಗೆ ಕರೆಯಲಾಗುತ್ತಿದೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಕುಮಾರ್‌, ಲೋಕೋಪಯೋಗಿ ಇಲಾಖೆಯ ಗಣೇಶ್‌ ಅರಳಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿಯಲ್ಲಿ ತ್ವರಿತ; ಇಲ್ಲಿ ವಿಳಂಬ
ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ ಮಾತನಾಡಿ, ಬೀಚ್‌ ಅಭಿವೃದ್ಧಿ ಯೋಜನೆಯಲ್ಲಿ ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಮಗಾರಿ ತ್ವರಿತಗೊಂಡಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಕೆಆರ್‌ಐಡಿಎಲ್‌ ಸಂಸ್ಥೆ ಯೋಜನೆಯಲ್ಲಿ ವಿಳಂಬಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಆರ್‌ಐಡಿಎಲ್‌ ಅಧಿಕಾರಿ ರವಿ, ಸೋಮೇಶ್ವರ ಮತ್ತು ಸುರತ್ಕಲ್‌ ಬೀಚ್‌ ಅಭಿವೃದ್ಧಿ ಅಂದಾಜು ಪಟ್ಟಿ ಸಿದ್ಧಗೊಂಡಿದೆ. ಆದರೆ ತಣ್ಣೀರುಬಾವಿ, ತಲಪಾಡಿ ಹಾಗೂ ಉಳ್ಳಾಲ ಬೀಚ್‌ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರಕಾರದಿಂದ ಮಂಜೂರಾತಿ ದೊರಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next