Advertisement

Minister Nagendra ರಾಜೀನಾಮೆ ಪಡೆಯಬೇಕು,ಈಶ್ವರಪ್ಪ ಕೇಸ್‌ನಲ್ಲಿ ಹೀಗಿರಲಿಲ್ಲ: ಬೊಮ್ಮಾಯಿ

07:09 PM May 30, 2024 | Team Udayavani |

ಕೊಪ್ಪಳ: ವಾಲ್ಮೀಕಿ ನಿಗಮದ ಅಧಿಕಾರಿ ಸಾವಿನ ಪ್ರಕರಣದಲ್ಲಿ ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಸಿಎಂ ಅವರು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯ ಮಾಡಿದರು.

Advertisement

ಕೊಪ್ಪಳ ಗವಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡೆತ್‌ನೋಟ್‌ನಲ್ಲಿ ಎಲ್ಲವೂ ಉಲ್ಲೇಖವಾಗಿದೆ. ಬ್ಯಾಂಕ್‌ಗೆ ಹಣ ವರ್ಗಾವಣೆಯಾಗಿದೆ. ಮೌಖಿಕ ಆದೇಶ ಮಾಡಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಆದರೆ ಈಶ್ವರಪ್ಪ ಕೇಸ್‌ನಲ್ಲಿ ಇಂಥಹ ಡೆತ್‌ನೋಟ್ ಇರಲಿಲ್ಲ. ಇಲ್ಲಿ ಅಧಿಕಾರಿಯ ಕೈ ಬರಹವೇ ಇದೆ. ಹಣ ಹೋಗಿರುವುದು ಬ್ಯಾಂಕ್ ದಾಖಲೆಯಿಂದ ಸ್ಪಷ್ಟವಾಗಿದೆ. ಇಷ್ಟೆಲ್ಲಾ ನಡೆದರೂ ಸಹಿತ ಇಲಾಖೆ ಸಚಿವರು ನಾನು ಮಂತ್ರಿಯಾಗಿ ಮುಂದುವರೆಯುವೆ ಎಂದರೆ ಇದು ಭಂಡತನ ಅಲ್ಲದೇ ಮತ್ತೇನು ಎಂದರು.

ಹಿಂದೆ ಈಶ್ವರಪ್ಪ ಅವರು ಮಾಡದಿರುವ ತಪ್ಪಿಗೆ ಅವರು ರಾಜೀನಾಮೆ ತೆಗೆದುಕೊಂಡರು. ಈ ಸರ್ಕಾರದಲ್ಲಿ ಎಲ್ಲವೂ ದಾಖಲೆ ಇವೆ. ಇವರಲ್ಲಿ ಹಗಲು ದರೋಡೆ ನಡೆದಿದೆ. ಇಲಾಖೆ ಹಣವು ವಿವಿಧ ಖಾತೆಗಳು ಹಾಗೂ ತೆಲಂಗಾಣ ಸಹಕಾರಿ ಸಂಘಕ್ಕೆ ಹಣ ಹೋಗುತ್ತದೆ ಎಂದರೆ ಈ ಸರ್ಕಾರ ಆಡಳಿತ ಮಾಡುತ್ತಿದೆಯಾ ? ಇದನ್ನು ಸರ್ಕಾರ ಎಂದು ಕರೆಯಬೇಕಾ ಎಂದು ವಾಗ್ಧಾಳಿ ನಡೆಸಿದರು.

ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಕೊಡಲಿ 

ರಾಜ್ಯದಲ್ಲಿ ಬೀಜ, ಗೊಬ್ಬರದ ಕೊರತೆಯಿದೆ. ಬೀಜದ ದರವು ಹೆಚ್ಚಳವಾಗಿದೆ. ಸರ್ಕಾರ ತಕ್ಷಣ ಬೀಜಗಳಿಗೆ ಸಬ್ಸಿಡಿ ಕೊಡುವ ಜೊತೆಗೆ ಪ್ರತಿ ಹೆಕ್ಟೇರ್‌ಗೆ ಬೀಜ, ಗೊಬ್ಬರ ಖರೀದಿಗಾಗಿಯೇ 25 ಸಾವಿರ ರೂ. ಕೊಡುವ ಕೆಲಸ ಮಾಡಲಿ ಎಂದು ಬಸವರಾಜ ಬೊಮ್ಮಾಯಿ ಅವರು ಒತ್ತಾಯ ಮಾಡಿದರು.

Advertisement

ರಾಜ್ಯದಲ್ಲಿ ರೈತರಿಗೆ ಸರಿಯಾದ ಗೊಬ್ಬರ ಸಿಗುತ್ತಿಲ್ಲ. ಡಿಎಪಿ ಕೊರತೆಯಿದೆ. ಬಿತ್ತನೆ ಬೀಜ ಕೊರತೆಯಿದೆ. ಒಂದು ಹಂಗಾಮಿಗೆ ಏಷ್ಟು ಬೀಜ ಬೇಕಿದೆ ಎನ್ನುವುದು ತಿಳಿಯಬೇಕು. ಬರಗಾಲವಿದೆ ಎನ್ನುವ ಕುಂಟು ನೆಪ ಹೇಳುವುದು ಸರಿಯಲ್ಲ. ಬೀಜ ಉತ್ಪಾದನೆ ಮಾಡಬೇಕು. ಬೀಜ ಉತ್ಪಾದನೆಯ ಫಾರ್ಮ್‌ಗಳೇ ಬೇರೆ ಇವೆ. ಬೇರೆ ರಾಜ್ಯಗಳಿಂದಲೂ ಬೀಜ ತರಿಸಬಹುದು. ಸರ್ಕಾರಕ್ಕೆ ಕನಿಷ್ಟ ಬೀಜವನ್ನು ಕೊಡುವ ಕೆಲಸ ಆಗಿಲ್ಲ. ಬೀಜದ ಕೊರತೆಯಿದೆ, ದರ ಹೆಚ್ಚಾಗಿದ್ದರೆ ಸರ್ಕಾರ ಬೀಜಕ್ಕೆ ಸಹಾಯಧನ ಕೊಡುವ ಕೆಲಸ ಮಾಡಲಿ. ಬೀಜ, ಗೊಬ್ಬರಕ್ಕಾಗಿ ಸರ್ಕಾರ ಪ್ರತಿ ರೈತನಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಕೊಡಲಿ. ಬರಗಾಲ ಬಂದರೂ ಸರಿಯಾಗಿ ಬರ ಪರಿಹಾರ ಕೊಡಲಿಲ್ಲ. ಕೇಂದ್ರ ಸರ್ಕಾರ ಕೊಟ್ಟರೂ ಇವರು ಕೊಡಲಿಲ್ಲ. ರೈತರ ಪರವಾದ ಸರ್ಕಾರ ಇದೆಯಾ ? ಎಂದರು.

ಶಿಕ್ಷಣ, ಅರಣ್ಯ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರ ವೇತನ ಪಾವತಿ ಆಗಿಲ್ಲ. ಹಾಲಿನ ಪ್ರೋತ್ಸಾಹಧನವೂ ಬಂದಿಲ್ಲ. ಗುತ್ತಿಗೆದಾರರ ಬಿಲ್ ಪಾವತಿ ಮಾಡಿಲ್ಲ. ಈ ಸರ್ಕಾರದ ಖಜಾನೆ ಖಾಲಿಯಾಗಿದೆ. ಸರ್ಕಾರ ನಂಬಿ ಕೆಲಸ ಮಾಡುವ ಮನೆಯನ್ನು ಖಾಲಿ ಮಾಡುತ್ತಿದ್ದಾರೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದ್ದು, ಕಾನೂನು ಪ್ರಕಾರ ಅವರಿಗೆ ಏನು ಆಗಬೇಕು ಅದು ಆಗುತ್ತದೆ. ಅವರಿಗೆ ಕಾನೂನಿನ ಶಿಕ್ಷೆ ಆಗಲಿದೆ. ಅವರು ಏಷ್ಟು ಹೇಯ ಕೃತ್ಯ ಮಾಡಿದ್ದು ತಪ್ಪಿದೆಯೋ ? ಪ್ರಚಾರ ಮಾಡಿದ್ದೂ ಅಷ್ಟೇ ತಪ್ಪು, ಅದರಿಂದ ಎಸ್‌ಐಟಿ ಎರಡನ್ನೂ ಗಂಭೀರವಾಗಿ ಪರಿಗಣಿಸಲಿ, ಎಸ್‌ಐಟಿ ನಿತ್ಯ ಒಂದೊಂದು ಸುದ್ದಿ ಬಿಟ್ಟು ಜೀವಂತ ಇಡುವ ಕೆಲಸ ಮಾಡಿದೆ ಎಂದರು.

ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಅಧೋಗತಿಗೆ ಹೋಗಿದೆ. 15 ಸಾವಿರ ಶಿಕ್ಷಕರ ನೇಮಕಾತಿ ಸಿದ್ದವಿದೆ. ಈ ಸರ್ಕಾರವು ಏನೂ ಮಾಡುತ್ತಿಲ್ಲ. ಹೈಕ ಭಾಗದಲ್ಲಿ 5 ಶಿಕ್ಷಕರ ನೇಮಕಾತಿ ಆಗಬೇಕಿತ್ತು. ಅದೂ ನಿಂತುಹೋಗಿದೆ. ಒಟ್ಟು ನಮ್ಮ ಕಾಲದಲ್ಲಿ 14 ಸಾವಿರ ಶಿಕ್ಷಕರ ಅನುಮತಿ ನೀಡಿತ್ತು. ಒಂದು ನೇಮಕಾತಿ ಆಗಿಲ್ಲ. ಹೈಕ ಭಾಗ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. 5 ಸಾವಿರ ಕೋಟಿ ಇದ್ದರೂ ಖರ್ಚು ಮಾಡುತ್ತಿಲ್ಲ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಿಲ್ಲ, ಸಮಾಜಘಾತಕ ಶಕ್ತಿಗಳಿಗೆ ಪೊಲೀಸರ ಭಯವಿಲ್ಲ. ಕಾನೂನಿನ ಭಯವಿಲ್ಲ, ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. ಹಲ್ಲೆ ಮಾಡಿದ ವ್ಯಕ್ತಿಗಳಿಗೆ ರಾಜಕೀಯ ರಕ್ಷಣೆಯಿದೆ. ಪೊಲೀಸರೇ ಅಸಹಾಯಕರಾಗಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದರೂ ಯಾವುದೇ ಕ್ರಮವಾಗಿಲ್ಲ. ಬೀದರ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಜೈ ಶ್ರೀರಾಮ ಎಂದರೂ ಗಲಾಟೆಯಾಗುತ್ತದೆ. ಇದರ ಹಿಂದೆ ಯಾರ ಕುಮ್ಮಕ್ಕು ಇದೆ. ಇಷ್ಟಾದರೂ ರಾಜ್ಯ ಸರ್ಕಾರದ ಧೋರಣೆ ಸರಿಯಲ್ಲ. ಈ ಸರ್ಕಾರ ಯಾವತ್ತು ಹೋಗುತ್ತೋ ಆ ಹೊತ್ತು ರಾಜ್ಯ ನಿಟ್ಟುಸಿರು ಬಿಡಲಿದೆ ಎಂದರು.

ಗವಿಮಠಕ್ಕೆ ಅನುದಾನದ ತೊಂದರೆಯಾದರೆ ಸಿಎಂ ಗಮನಕ್ಕೆ
ಗವಿಮಠದ ವಿದ್ಯಾರ್ಥಿ ನಿಲಯಕ್ಕೆ 10 ಕೋಟಿ ರೂ. ಘೋಷಣೆ ಮಾಡಿದ ವಿಚಾರಕ್ಕೆ ಶ್ರೀಗಳು ಅನುದಾನ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ. ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದಿದ್ದಾರೆ.ಎಲ್ಲಾದರೂ ತೊಂದರೆಯಾದರೆ ನಾನೇ ಸ್ವತಃ ಸಿಎಂ ಅವರ ಗಮನಕ್ಕೆ ತರುವ ಕೆಲಸ ಮಾಡುವೆ ಎಂದಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಗವಿಮಠಕ್ಕೆ ಭೇಟಿ ಕೊಡುವುದು ಬಹು ದಿನಗಳ ಇಚ್ಛೆಯಿತ್ತು. ಈ ಭಾಗದಲ್ಲಿ ಆಗಮಿಸಿದ್ದರಿಂದ ಶ್ರೀಗಳನ್ನು ಭೇಟಿ ಮಾಡಿ ಗವಿಮಠದಲ್ಲಿ 2 ಗಂಟೆ ಕಾಲ ಕಳೆದಿದ್ದೇನೆ. ಗವಿಮಠವು ದೊಡ್ಡ ಪರಂಪರೆ ಹೊಂದಿದೆ. ಅಷ್ಟೇ ಈ ಮಠವು ವರ್ತಮಾನದಲ್ಲಿ ಆದರ್ಶವನ್ನು ಹೊಂದಿದೆ. ದಕ್ಷಿಣದಲ್ಲಿ ಸಿದ್ದಗಂಗಾ ಇದ್ದರೆ ಉತ್ತರದಲ್ಲಿ ಗವಿಮಠ ಇದೆ. ಇಲ್ಲಿ ನಾಲ್ಕುವರೆ ಸಾವಿರ ವಿದ್ಯಾರ್ಥಿಗಳಿಗೆ ಪ್ರಸಾದ, ವಸತಿ ನಿಲಯ ಶಿಕ್ಷಣ ದೊರೆಯುತ್ತಿದೆ. ಅನ್ನ, ಅಕ್ಷರ, ಅರಿವು ಕೊಡುವ ಕೆಲಸ ನಡೆದಿದೆ. ಗುರುಗಳ ಆರ್ಶೀವಾದ ನಡೆದಿದೆ. ಸಮಾಜಕ್ಕೆ ಅವರು ಒಳ್ಳೆಯ ಪ್ರಭಾವ ಬೀರುವ ಕೆಲಸ ಮಾಡಿದ್ದಾರೆ. ಬಡ ಮಕ್ಕಳ ಪರ ಅವರಿಗೆ ಒಲವು ಇದೆ. ಶ್ರೀಮಠಕ್ಕೆ ಭೇಟಿ ಕೊಟ್ಟಾಗೆಲ್ಲಾ ಒಳ್ಳೆಯದನ್ನು ಮಾಡಬೇಕು ಎನ್ನುವ ಚಿಂತನೆ ನಮಗೆ ಮೂಡುತ್ತದೆ ಎಂದರು.

ಈ ವೇಳೆ ಎಂಎಲ್‌ಸಿ ಹೇಮಲತಾ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next