ಬೆಂಗಳೂರು: ಕಳೆದ ಕೆಲ ಸಮಯದಿಂದ ಕರುನಾಡಿನ ರಾಜಕೀಯದಲ್ಲಿ ವಾದ – ಪ್ರತಿವಾದಗಳಿಗೆ ಕಾರಣವಾಗಿರುವ ಮಂಡ್ಯದ ಉರಿಗೌಡ ಮತ್ತು ನಂಜೇಗೌಡರ ಹೆಸರು ಇದೀಗ ಸಿನಿಮಾರಂಗದಲ್ಲಿ ಟೈಟಲ್ ಆಗಿ ರಿಜಿಸ್ಟರ್ ಆಗಿದೆ.
ಈಗಾಗಲೇ ಚಂದನವನದಲ್ಲಿ ʼಕುರುಕ್ಷೇತ್ರʼವನ್ನು ನಿರ್ಮಾಣ ಮಾಡಿ ಸೈ ಎನ್ನಿಸಿಕೊಂಡಿರುವ ಸಚಿವ ಮುನಿರತ್ನ ʼಉರಿಗೌಡ ಮತ್ತು ನಂಜೇಗೌಡʼ ಸಿನಿಮಾವನ್ನು ನಿರ್ಮಾಣ ಮಾಡಲು ರೆಡಿಯಾಗಿದ್ದಾರೆ. ಸಿನಿಮಾದ ಮುಹೂರ್ತ ದಿನಾಂಕವನ್ನು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.
ವೃಷಭಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ ಎಂದು ಮುನಿರತ್ನ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಲಂಡನ್ ಹೇಳಿಕೆ ವಿವಾದ: ಜಿ-20 ಸಮಾಲೋಚನಾ ಸಭೆಯಲ್ಲಿ ಸ್ಪಷ್ಟನೆ ನೀಡಿದ ರಾಹುಲ್
Related Articles
ಈ ಸಿನಿಮಾವನ್ನು ಆರ್.ಎಸ್.ಗೌಡ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಚಿತ್ರಕಥೆ ಸಿನಿಮಾಕ್ಕಿದೆ. ಬಿಜೆಪಿ ನಾಯಕರಾದ ಆರ್. ಅಶೋಕ್, ಸಿಟಿ ರವಿ ಅವರು ಸಿನಿಮಾವನ್ನು ಅರ್ಪಿಸುತ್ತಿದ್ದಾರೆ.
ಕಳೆದ ಕೆಲ ಸಮಯದಿಂದ ರಾಜ್ಯದಲ್ಲಿ ʼಉರಿಗೌಡ ಮತ್ತು ನಂಜೇಗೌಡʼ ಹೆಸರು ವಾದ – ಪ್ರತಿವಾದಗಳಿಗೆ ಕಾರಣವಾಗಿದೆ. ಟಿಪ್ಪುವನ್ನು ಕೊಂದವರು ʼಉರಿಗೌಡ ಮತ್ತು ನಂಜೇಗೌಡ ಎನ್ನುವುದು ಕೆಲವರ ವಾದವಾದರೆ, ಕೆಲ ಇತಿಹಾಸ ತಜ್ಞರು ಇದು ಸುಳ್ಳು, ಇದೊಂದು ಕಾಲ್ಪನಿಕ ವ್ಯಕ್ತಿಗಳ ಹೆಸರು ಮಾತ್ರ ಎಂದಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಈ ವಿಚಾರ ಚರ್ಚೆ ಆಗುತ್ತಿರುವುದು ಯಾವ ರೀತಿಯ ರಾಜಕೀಯ ತಿರುವು ಇದು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.