Advertisement

ಕೇಂದ್ರದಲ್ಲಿ 9ವರ್ಷ ಅಧಿಕಾರದಲ್ಲಿದ್ದು ಬೆಲೆ ಏರಿಕೆ ಮಾಡಿದ್ದೇ ಬಿಜೆಪಿ ಸಾಧನೆ: ಎಂ.ಬಿ.ಪಾಟೀಲ

06:14 PM Aug 05, 2023 | Team Udayavani |

ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ವಿಜಯಪುರ ಜಿಲ್ಲೆಯ 4.36 ಲಕ್ಷ ಕುಟುಂಬಗಳಿಗೆ ಲಾಭವಾಗಲಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಸರ್ಕಾರದ ಬದ್ಧತೆಗೆ ಇದು ಸಾಕ್ಷಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

Advertisement

ಶನಿವಾರ ನಗರದ ಕಂದಗಲ್ ಹನುಮಂತ್ರಾಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲೆಯ ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡುವ ಗ್ರಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಮಹಿಳೆಯರ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ, ಕೇಂದ್ರ ಸರ್ಕಾರದ ಅಸಹಕಾರಾದ ಮಧ್ಯೆಯೂ ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ. ಅಕ್ಕಿ ಹಾಗೂ ಪ್ರತಿ ಕೆಜಿಗೆ 34 ರೂ.ನಂತೆ 5 ಕೆ.ಜಿ. ಅಕ್ಕಿ ಮೌಲ್ಯದ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಆಗಸ್ಟ್ 15 ರಂದು ಸ್ವಾತಂತ್ರೋತ್ಸವದ ಸಂದರ್ಭದಲ್ಲಿ 4ನೇ ಗ್ಯಾರಂಟಿಯಾಗಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆಯಲಿದ್ದು, ನಂತರ ಯುವನಿಧಿ ಗ್ಯಾರಂಟಿ ಜಾರಿಗೆ ಬರಲಿದೆ. ಇದು ಕಾಂಗ್ರೆಸ್ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಇರುವ ಬದ್ಧತೆ ಎಂದು ವಿವರಿಸಿದರು.

ಗ್ರಹಜ್ಯೋತಿ ಯೋಜನೆಯನ್ನೇ ಅವಲೋಕಿಸಿದರೆ ಜಿಲ್ಲೆಯಲ್ಲಿ 4.60 ಲಕ್ಷ ಕುಟುಂಬಗಳಲ್ಲಿ 4.34 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಯೋಜನೆಯ ಲಾಭ ಸಿಕ್ಕಿದ್ದು, ಗ್ರಾಮೀಣ ಪ್ರದೇಶದ 2 ಸಾವಿರ ಕುಟುಂಬಗಳು ಸೇರಿ ಜಿಲ್ಲೆಯ 24 ಸಾವಿರ ಕುಟುಂಬಗಳು ಮಾತ್ರ ಯೋಜನೆ ಸೌಲಭ್ಯದಿಂದ ಹೊರಗುಳಿಯಲಿವೆ. ಇದರ ಹೊರತಾಗಿಯೂ 99.5 ರಷ್ಟು ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಕ್ಕಿದೆ ಎಂದು ವಿವರಿಸಿದರು.

ಇದನ್ನೂ ಓದಿ:ಗ್ಯಾರಂಟಿ ಜಾರಿ ಮಾಡಿದ್ದರಿಂದ ಬಿಜೆಪಿ – ಜೆಡಿಎಸ್ ಹತಾಶವಾಗಿದೆ: ಸಚಿವ ಮಂಕಾಳು ವೈದ್ಯ

Advertisement

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಭರವಸೆಗಳನ್ನು ಜಾರಿಗೆ ತಂದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸುತ್ತಿದ್ದಾರೆ. ಹಿಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ 10 ಎಚ್‍ಪಿ ವರೆಗಿನ ಕೃಷಿ ಪಂಪ್‍ ಸೆಟ್‍ಗೆ ಉಚಿತ ವಿದ್ಯುತ್ ನೀಡಿದ್ದರು ಎಂದು ವಿವರಿಸಿದರು.

ಮೋದಿ ಅಚ್ಛೇ ದಿನ್ ತರುತ್ತೇವೆಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 9 ವರ್ಷವಾದರೂ ಯಾವೊಂದು ಭವಸೆ ಈಡೇರಿಸಲಿಲ್ಲ. ಬದಲಾಗಿ ಪೆಟ್ರೋಲ್, ಗ್ಯಾಸ್ ಸೇರಿದಂತ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿತು. ಕೆಲವೇ ಕೆಲವು ಉದ್ಯಮಿಗಳು ಮಾಡಿದ್ದ 23 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇ ಬಿಜೆಪಿ ಸಾಧನೆ. ಉದ್ಯಮಿಗಳ ಸಾಲಮನ್ನಾ ಮಾಡಿದಾಗ ದೇಶ ದಿವಾಳಿ ಆಗಿರಲಿಲ್ಲವೇ ಎಂದು ಟೀಕಾ ಪ್ರಹಾರ ನಡೆಸಿದರು.

ನಿರುದ್ಯೋಗಿಗಳಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಮಾತನ್ನು ಪಾಲಿಸಲಿಲ್ಲ. ವಿದೇಶದಲ್ಲಿರುವ ಕಪ್ಪುಹಣ ತರುವ ಮಾತು ಉಳಿಸಿಕೊಂಡಿಲ್ಲ. ಆದರೆ ಬಡವರ ಪರವಾಗಿರುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನಪರ ಕಾರ್ಯಕ್ರಮ ಮಾಡುತ್ತ ಬಂದಿದೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸರಕಾರ ರೈತರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿದ್ದ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು ಎಂದು ಸ್ಮರಿಸಿದರು.

ಸಿಂದಗಿ ಶಾಸಕ ಅಶೋಕ ಮನಗೂಳಿ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಜಿಲ್ಲಾಧಿಕಾರಿ ಭೂಬಾಲನ್, ಜಿ.ಪಂ. ಸಿಇಒ ರಾಹುಲ್ ಶಿಂಧೆ, ಎಎಸ್ಪಿ ಶಂಕರ ಮಾರಿಹಾಳ, ಹೆಸ್ಕಾಂ ಹುಬ್ಬಳ್ಳಿ ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲಟ್ಟಿ, ಅಧೀಕ್ಷಕ ಅಭಿಯಂತರ ಸಿದ್ಧಪ್ಪ ಬಿಂಜಗೇರಿ, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ.ಕೆ.ಗೋಟ್ಯಾಳ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next