Advertisement

ಕೊರೆಂಗಾವ್‌ ಹಿಂಸಾಚಾರಕ್ಕೆ ಸಚಿವ ಮಹದೇವಪ್ಪ ಖಂಡನೆ

11:31 AM Jan 06, 2018 | |

ಮೈಸೂರು: ಮಹಾರಾಷ್ಟ್ರದ ಕೊರೆಂಗಾವ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಖಂಡಿಸಿರುವ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ , ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರು ಘಟನೆಯ ಬಗ್ಗೆ ಸೂಕ್ಷವಾಗಿ ಚಿಂತನೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಕೊರೆಂಗಾವ್‌ನಲ್ಲಿ ಕಳೆದ 50 ವರ್ಷದಿಂದಲೂ ವಿಜಯೋತ್ಸವವನ್ನು ನಡೆಸಲಾಗುತ್ತಿದೆ. ಆದರೆ, ಇತ್ತೀಚೆಗೆ ಯುದ್ಧದ ಸವಿ ನೆನಪಿನ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ದಲಿತರ ಹಕ್ಕುಗಳನ್ನು ಹತ್ತಿಕ್ಕಿ, ಭಯದ ವಾತಾವರಣ ಸೃಷ್ಟಿಸುವ ಮೂಲಕ ಹಿಂಸಾಚಾರಕ್ಕೆ ತಿರುಗಿಸಿದೆ.

ಇದನ್ನು ಗಮನಿಸಿದರೆ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ದಲಿತರ ಮೇಲೆ ಹಿಂಸೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ಸಮುದಾಯ ಅಥವಾ ಪ್ರಜೆಗಳು ಸಂವಿಧಾನದಲ್ಲಿ ತಮ್ಮ ವಿಜಯೋತ್ಸವ ಆಚರಣೆ ಮಾಡುವ ಪರಿಸ್ಥಿತಿ ಇಲ್ಲದಂತಾಗಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ದೇಶದ ಐಕ್ಯತೆಗೆ ಧಕ್ಕೆ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಹುತ್ವಕ್ಕೆ ಧಕ್ಕೆ: ದೇಶದ ಸಂವಿಧಾನ ಅಪಾಯದಲ್ಲಿದ್ದು, ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ. ದೇಶದ ಐಕ್ಯತೆ, ಸಾರ್ವಭೌಮತ್ವವನ್ನು ನಾಶಗೊಳಿಸಿ, ಬಹುತ್ವಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕರು, ಸಂಸದರು ದೇಶದ ಸಂವಿಧಾನದ ಬದಲಾವಣೆಯ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದು, ಇದು ಅವರ ಆಡಳಿತದ ದಿಕ್ಸೂಚಿಯನ್ನು ತೋರಿಸುತ್ತಿದೆ.

ಪ್ರಚೋದನಕಾರಿ ಕೆಲಸ ಮಾಡುವವರ ವಿರುದ್ಧ ಉಗ್ರವಾದ ಕ್ರಮಕೈಗೊಳ್ಳಬೇಕು ಎಂದ ಅವರು, ದೇಶದ ಸಂವಿಧಾನ ಶ್ರೇಷ್ಠವೆಂದು ಹೇಳುವ ಪ್ರಧಾನಮಂತ್ರಿ ಅವರಿಗೆ ಸಂವಿಧಾನದ ಬಗ್ಗೆ ಪ್ರಾಮಾಣಿಕ ಗೌರವವಿದ್ದರೆ ದಲಿತರ ಹಕ್ಕುಗಳನ್ನು ದಮನಗೊಳಿಸುವ ಧರ್ಮಾಂದರು, ಮತಾಂಧ ಶಕ್ತಿಗಳ ವಿರುದ್ಧ ಕ್ರಮವಹಿಸಬೇಕೆಂದು ಆಗ್ರಹಿಸಿದರು.

Advertisement

ಕಾನೂನು ಕೆಲಸ ಮಾಡಲಿದೆ: ದೇಶದ ಸಂವಿಧಾನ ಎಲ್ಲರಿಗೂ ಸಮಾನತೆ ಮತ್ತು ಸಮಾನ ಅವಕಾಶವನ್ನು ಕಲ್ಪಿಸಿದ್ದು, ಕೋಮುಸೌಹಾರ್ದತೆ ಸಂವಿಧಾನದ ಮೂಲ ಉದ್ದೇಶವಾಗಿದೆ. ಅಲ್ಲದೆ ಕಾಂಗ್ರೆಸ್‌ ಎಂದಿಗೂ ಸಮಾಜದ ಕೋಮು ಸೌಹಾದ‌ìತೆ ನಾಶಗೊಳಿಸಲು ಒಂದು ಜಾತಿ, ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಿಸಿಲ್ಲ, ಬಳಸಿಕೊಳ್ಳುವುದೂ ಇಲ್ಲ.

ಆದರೆ, ಅಲ್ಲಿನ ಜನರ ಸೌಹಾದ‌ìತೆ ನಡುವೆ ಅಲ್ಲಿನ ಘಟನೆಗಳನ್ನು ರಾಜಕೀಯ ಪ್ರೇರಿತವಾಗಿಸಿ, ಅಶಾಂತಿ ಮೂಡಿಸಲು ಇಂತಹ ಘಟನೆಗಳನ್ನು ರಾಜಕೀಯ ಪಕ್ಷಗಳು ಮತ್ತು ಅದರ ಅಂಗಸಂಸ್ಥೆಗಳು ಮುಂದಾಗದಂತೆ ಎಚ್ಚರವಹಿಸಬೇಕಿದೆ. ಸಂವಿಧಾನದ ಆಶಯ, ಕಾನೂನಿನ ವಿರುದ್ಧವಾಗಿ ನಡೆಯುವ ಹಿಂದೂ ಅಥವಾ ಮುಸ್ಲಿಂ ಮೂಲಭೂತವಾದಿಗಳು ಸಹ ಶಿûಾರ್ಹರಾಗಿದ್ದು, ಕಾನೂನು ತನ್ನ ಕೆಲಸ ಮಾಡಲಿದೆ.

ಮಂಗಳೂರಿನಲ್ಲಿ ಹತ್ಯೆಯಾದ ದೀಪಕ್‌ ರಾವ್‌ ಕಳೆದ ಏಳು  ವರ್ಷದಿಂದ ಮುಸ್ಲಿಂ ಸಮುದಾಯದವರೊಂದಿಗೆ ಕೆಲಸ ಮಾಡಿ, ಸೌಹಾರ್ದದಿಂದ ಬದುಕಿದ್ದರು. ಈ ನಿಟ್ಟಿನಲ್ಲಿ ಪ್ರಸ್ತುತ ಘಟನೆಯನ್ನು ಮುಂದಿಟ್ಟುಕೊಂಡು ಸೌಹಾರ್ದತೆ ಹಾಳು ಮಾಡುವ ಕೆಲಸ ಮಾಡಬಾರದು ಎಂದರು.

ಹಿಂದುತ್ವದ ಕಾರ್ಡ್‌ ಪ್ಲೇ: ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಹಿಂದುತ್ವದ ಕಾರ್ಡ್‌ ಪ್ಲೇ ಮಾಡುತ್ತಿದ್ದು, ಅವರ ಈ ಪ್ರಯತ್ನ ಕರ್ನಾಟಕದಲ್ಲಿ ಯಶಸ್ಸು ಕಾಣುವುದಿಲ್ಲ ಎಂದು  ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು. 

ಕೊಲೆಯನ್ನು ಯಾರೇ ಮಾಡಿದ್ದರೂ ಅದು ತಪ್ಪು, ಮುಸ್ಲಿಂ ಮತಾಂಧ ಸಂಘಟನೆ ಮಾಡಿದ್ದರು ತಪ್ಪೇ ಅಥವಾ ಹಿಂದೂ ಹಿಡನ್‌ ಅಜೆಂಡಾ ಹೊಂದಿರುವ ಸಂಘಟನೆಗಳು ಮಾಡಿದ್ದರು ತಪ್ಪಾಗಲಿದೆ. ಹೀಗಾಗಿ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರು ಯಾವ ಸಂಘಟನೆಗೆ ಸೇರಿದ್ದರೂ ಅವರಿಗೆ ಶಿಕ್ಷೆಯಾಗಲಿದೆ ಎಂದರು.

ಕ್ಷೇತ್ರ ಬದಲಿಸುವ ಚಿಂತನೆ ಮಾಡಿಲ್ಲ: ಡಾ.ಎಚ್‌.ಸಿ.ಮಹದೇವಪ್ಪ
ಕ್ಷೇತ್ರ ಬದಲಾವಣೆ ಮಾಡುವ ಬಗ್ಗೆ ಈವರೆಗೂ ಚಿಂತನೆ ನಡೆಸಿಲ್ಲ ಮತ್ತು ಇದಕ್ಕಾಗಿ ಯಾವುದೇ ಕ್ಷೇತ್ರವನ್ನು ಹುಡುಕುತ್ತಿಲ್ಲ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ತಿ.ನರಸೀಪುರ ಕ್ಷೇತ್ರದ ಶಾಸಕನಾಗಿರುವ ತಮ್ಮ ಅವಧಿ ಮೇ ತಿಂಗಳವರೆಗೂ ಇದೆ. ಇದಾದ ನಂತರ ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ಬದ್ಧವಾಗಿದ್ದೇನೆ.

ಇದರ ಹೊರತಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಗಳೂರಿನ ಸಿ.ವಿ.ರಾಮನ್‌ ನಗರವನ್ನು ಆಯ್ಕೆ ಮಾಡಿಕೊಂಡಿಲ್ಲ. ಆದರೂ ತಮ್ಮ ಪಕ್ಷದ ಕೆಲವು ನಾಯಕರು ಬೆಂಗಳೂರಿಗೆ ಕರೆಯುತ್ತಿದ್ದು, ನಂಜನಗೂಡಿನ ಜನರು ಸಹ ತಮ್ಮನ್ನು ಕರೆಯುತ್ತಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ನಿರ್ಧರಿಸುವುದಾಗಿ ಹೇಳಿದರು.

ತಮ್ಮ ಪುತ್ರ ಸುನೀಲ್‌ ಬೋಸ್‌ ಸದ್ಯ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದು, ಪಕ್ಷದ ಇತರೆ ಕಾರ್ಯಕರ್ತರು ಅಪೇಕ್ಷೆಪಟ್ಟಲ್ಲಿ ಅವರು ಚುನಾವಣೆಗೆ ಬರಲಿದ್ದಾರೆ. ಜನರಿಗೆ ಒಳ್ಳೆಯದು ಮಾಡುವ ಉದ್ದೇಶ ಹೊಂದಿರುವ ತಮ್ಮ ಪುತ್ರ ಸೇರಿದಂತೆ ಯಾರೇ ಆದರೂ ರಾಜಕೀಯಕ್ಕೆ ಬರಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next