ಗಂಗಾವತಿ: ಮಾಜಿ ಮುಖ್ಯಮಂತ್ರಿ ಪುತ್ರ ಎಂಬ ಅರ್ಹತೆಯಲ್ಲಿ ಸಚಿವ ಸ್ಥಾನ ಪಡೆದಿರುವ ಸಚಿವ ಮಧುಬಂಗಾರಪ್ಪ ಅವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಬಂದಿದೆ. ಇದು ಒಳ್ಳೆಯದಲ್ಲ. ಈಗಾಗಲೇ 2018 ರಲ್ಲಿ ವೀರಶೈವ ಸಮಾಜ ಒಡೆದ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಇದೀಗ ಈಡಿಗ ಸಮಾಜವನ್ನು ಒಡೆಯುತ್ತಿದ್ದಾರೆಂಬ ಅಪವಾದ ಹೊರಬಾರದೆಂದು ಆರ್ಯ ಈಡಿಗರ ಸಮಾಜದ ಜಗದ್ಗುರು ಪ್ರಣಾವಾನಂದ ಸ್ವಾಮೀಜಿ ಕಿಡಿ ಕಾರಿದ್ದಾರೆ.
ನಗರದ ಸರ್ವೇಶ ಹೊಟೇಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ”ಅತೀ ಹಿಂದುಳಿದ ಸಮಾಜಗಳಿಗೆ ಇದುವರೆಗೂ ಆಡಳಿತ ನಡೆಸಿದ ಪಕ್ಷಗಳು ನ್ಯಾಯ ದೊರಕಿಸಿಲ್ಲ. ಈಡಿಗರ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ 500 ಕೋಟಿ ರೂ.ಗಳನ್ನು ಒದಗಿಸಬೇಕು. ಈಡಿಗರ ಸಮಾಜದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು.ಬೇಳೂರು ಗೋಪಾಲಕೃಷ್ಣ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೊಡಬೇಕು. 2004 ರಿಂದ ಈಡಿಗ ಸಮುದಾಯದ ಜೀವನ ನಡೆಸುವ ಮದ್ಯ ಸರಾಯಿ,ಹೆಂಡ ಮಾರಾಟ ನಿಷೇಧ ಮಾಡಿ ಈಡಿಗ ಜಾತಿಯನ್ನು ಆರ್ಥಿಕವಾಗಿ ದುರ್ಬಲ ಮಾಡಲಾಗಿದೆ. ಕುಲಶಾಸ್ತ್ರೀಯ ಅಧ್ಯಾಯ ಮಾಡಲು 25 ಲಕ್ಷರೂ.ಬಿಡುಗಡೆ ಮಾಡಲಾಗಿಲ್ಲ ಎಂದರು.
ವಿಧಾನ ಸೌಧದ ಎದುರು ಹೆಂಡದ ಮಾರಾಯ್ಯ ಹಾಗೂ ಮಹರ್ಷಿ ನಾರಾಯಣ ಗುರುಗಳ ಪುತ್ಥಳಿ ನಿರ್ಮಾಣ ಮಾಡಬೇಕು.ಸಿಎಂ ಸಿದ್ದರಾಮಯ್ಯ ಹಿಂದುಳಿದ ನಾಯಕರೆಂದು ಹೇಳುತ್ತಾರೆ. ಆದರೆ ಅನುದಾನ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರಕಾರ ಬಂದ ಮೇಲೆ ಈಡಿಗ ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸಿದ್ದರಾಮಯ್ಯ ನವರ ನಿರ್ಲಕ್ಷ್ಯ ಖಂಡಿಸಿ ಗಂಗಾವತಿ ಬಸವೇಶ್ವರ ಪುತ್ಥಳಿ ಬಳಿ ಡಿ.10 ರಂದು ಪ್ರತಿಭಟನೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದರು.
ಲೋಕಸಭಾ ಚುನಾವಣೆ ಯಲ್ಲಿ ಈಡಿಗ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಪಾದಯಾತ್ರೆ ಬೆಟ್ಟದ ಬಲ್ಕುಂದಿ ಗ್ರಾಮದಿಂದ ಬೆಂಗಳೂರು 800 ಕಿ.ಮೀ. 40 ದಿನ ಪಾದಯಾತ್ರೆ ಮಾಡಲಾಗುತ್ತದೆ ಎಂದರು.
ವಿನಾಶ ಕಾಲೇ ವಿಪರೀತ ಬುದ್ದಿ ಸಚಿವ ಮಧುಬಂಗಾರಪ್ಪ ವರ್ತಿಸುತ್ತಿದ್ದಾರೆ. ತಂದೆ ಹೆಸರಿನ ರಾಜಕೀಯ ಮಾಡುತ್ತಿರುವ ಸಚಿವರು ವಿವೇಚನೆಯಿಂದ ಮಾತನಾಡಬೇಕು. ವೀರಶೈವ ಸಮಾಜವನ್ನು ಸಿದ್ದರಾಮಯ್ಯ ಒಡೆದು ಅನುಭವಿಸಿದ್ದು ಸಾಲದು ಎನ್ನುವಂತೆ ಈಡಿಗ ಸಮಾಜವನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಈಡಿಗ ಸಮಾಜಕ್ಕೆ ಏನು ಮಾಡಿಲ್ಲ.ಅವರೊಬ್ಬ ಪಕ್ಷಾಂತರಿ ವ್ಯಕ್ತಿಯಾಗಿದ್ದಾರೆ. ಹಿರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ವೈಯಕ್ತಿಕವಾಗಿ ಸಚಿವ ಮಧುಬಂಗಾರಪ್ಪ ಟೀಕೆ ನಿರ್ಲಕ್ಷ್ಯ ಸಲ್ಲದು ಎಂದರು.
ಕಾಂತರಾಜು ವರದಿ ಅನುಷ್ಠಾನ ಆಗಬೇಕು. 23 ನಿಗಮ ಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಡಿ.10 ರಂದು ಬೆಂಗಳೂರಿನಲ್ಲಿ ಈಡಿಗ ಸಮಾವೇಶವಿದೆ.ಅಂದು ಗಂಗಾವತಿಯಲ್ಲಿ ಈಡಿಗ ಸಮಾಜದ ನೇತೃತ್ವದಲ್ಲಿ ಹಿಂದುಳಿದವರ ಏಳ್ಗೆಗಾಗಿ ಧರಣಿ ಹೋರಾಟ ನಡೆಸಲಾಗುತ್ತದೆ.ಈ ಧರಣಿಯಲ್ಲಿ ಮೇಲ್ವರ್ಗದ ಲಿಂಗಾಯತ, ಬ್ರಾಹ್ಮಣ ಜಾತಿಯಲ್ಲಿರುವ ಬಡವರಿಗೆ ಯೋಜನೆ ರೂಪಿಸುವಂತೆ ಬೇಡಿಕೆ ಸಲ್ಲಿಸಲಾಗುತ್ತದೆ. ಧರಣಿಗೆ ಅತೀ ಹಿಂದುಳಿದ ಜಾತಿಗಳ ಮಠಾಧೀಶರು, ಮಾಜಿ ಸಂಸದ ಎಚ್.ಜಿ.ರಾಮುಲು, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಸೇರಿ ಹಾಲಿ ಮಾಜಿ ಶಾಸಕರು ಸಚಿವರು ಪಾಲ್ಗೊಳ್ಳಲಿದ್ದಾರೆಂದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಇದ್ದರು.