ಬೆಂಗಳೂರು: ಜ್ಞಾನ ಭಾರತಿ ಆವರಣದಲ್ಲಿರುವ ನ್ಯಾಶನಲ್ ಲಾ ಸ್ಕೂಲ್‌ನಲ್ಲಿ ಕನ್ನಡಿಗರಿಗೆ ಸಿಗಬೇಕಾದ ಮೀಸಲು ಸಿಗುತ್ತಿಲ್ಲ ಎಂದು ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದು, ಫೆ.24ರಂದು ಮೇಲ್ಮನವಿಯ ವಿಚಾರಣೆ ನಡೆಯಲಿದೆ. ರಾಜ್ಯದ ಪ್ರತಿಪಾದನೆಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ನ್ಯಾಶನಲ್ ಲಾ ಸ್ಕೂಲ್‌ಗೆ ಸರಕಾರದಿಂದ 23 ಎಕರೆ ಭೂಮಿ ಕೊಡಲಾಗಿದೆ. ಕಳೆದ ನಾಲ್ಕು ವರ್ಷದಲ್ಲಿ 22 ಕೋಟಿ ರೂ. ಅನುದಾನ ಕೊಡಲಾಗಿದೆ. ಜತೆಗೆ 2020ರಲ್ಲಿ ಕಾನೂನು ತಿದ್ದುಪಡಿ ಮಾಡಿ ನಮ್ಮ ನಾಡಿನ ವಿದ್ಯಾರ್ಥಿಗಳಿಗೆ ಶೇ. 25 ಸೀಟು ಕೊಡಬೇಕೆಂದು ಹೇಳಲಾಗಿದೆ.
ಆದರೆ, 2020-21, 2021-22ರಲ್ಲಿ ಮೀಸಲಾತಿ ನೀಡಿಲ್ಲ. ಈ ಕಾನೂನು ತನ್ನನ್ನು ಏನು ಅಂದುಕೊಂಡಿದೆ ಎಂದು ವಿಧಾನಸಭೆಯಲ್ಲಿ ಶಾಸಕ ಸುರೇಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ 10 ವರ್ಷ ವ್ಯಾಸಂಗ ಮಾಡಿದ ಮಕ್ಕಳಿಗೆ ಶೇ. 25 ಮೀಸಲು ಪ್ರವೇಶ ಮಾಡಿಕೊಡಬೇಕೆಂದು ಶಾಸನ ಮಾಡಿಕೊಡಲಾಗಿದೆ. ದುರದೃಷ್ಟವಶಾತ್ ಕಾನೂನಿಗೆ ಹೈಕೋರ್ಟ್ ತಡೆ ನೀಡಿತು. ಬಳಿಕ ಸುಪ್ರಿಂ ಕೋರ್ಟ್‌ಗೆ ಮೇಲ್ಮನವಿ ಹೋಗಿದ್ದೇವೆ ಎಂದು ಹೇಳಿದರು.
ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಈ ವಿಚಾರದಲ್ಲಿ ವಿವಾದ ಬೇಡ, ಶೇ.25 ಮೀಸಲು ಕೊಡಿ ಎಂದು ವಿಶ್ವವಿದ್ಯಾನಿಲಯಕ್ಕೆ ಸೂಚಿಸಿದ್ದರು. ಅವತ್ತಿಂದ ಇವತ್ತಿನ ವರೆಗೂ ಮೀಸಲಾತಿ ಕೊಟ್ಟಿದ್ದಾರೆ. ಜನರಲ್ ಮೆರಿಟ್‌ನಲ್ಲಿ ಸೀಟು ಪಡೆದವರನ್ನೂ ಶೇ.25ರ ಮೀಸಲಿನ ವ್ಯಾಪ್ತಿಗೆ ಪರಿಗಣಿಸುತ್ತಿದ್ದಾರೆ ಎಂಬ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮೆರಿಟ್‌ನಲ್ಲಿ ಆಯ್ಕೆಯಾದವರನ್ನು ಹೊರತುಪಡಿಸಿ ಕನ್ನಡಿಗರಿಗೆ ಶೇ.25 ಮೀಸಲು ಕೊಡಬೇಕೆಂಬುದು ನಮ್ಮ ವಾದ ಎಂದು ಸದನಕ್ಕೆ ವಿವರಿಸಿದರು.
ಫೆ. 24ರಂದು ಸುಪ್ರಿಂಕೋರ್ಟ್‌ನಲ್ಲಿ ನಮ್ಮ ಅರ್ಜಿ ವಿಚಾರಣೆಗೆ ಬರುತ್ತಿದೆ. ಸಮರ್ಥ ವಕೀಲರನ್ನು ನಿಯೋಜಿಸಿದ್ದೇವೆ. ಈ ಪ್ರಕರಣದಲ್ಲಿ ಗೆಲುವು ಪಡೆಯುತ್ತೇವೆಂಬ ವಿಶ್ವಾಸವಿದ್ದು, ನಾವು ಸುಮ್ಮನೆ ಕುಳಿತಿಲ್ಲ. ನಾವು ಭೂಮಿ, ನೀರು, ಅನುದಾನ ಕೊಡುತ್ತೇವೆ, ನಮ್ಮ ಮಕ್ಕಳಿಗೆ ಮೀಸಲು ಕೊಡಲ್ಲ ಎಂದರೆ ಹೇಗೆ? ಅದನ್ನು ಪಡೆಯಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ ಎಂದರು.