ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧದ ಎಫ್‌ಐಆರ್‌ಗೆ ಕಾನೂನು ಮೂಲಕವೇ ಹೋರಾಟ ಮಾಡಲಾಗುವುದು. ಯಾವುದೇ ಕಾರಣಕ್ಕೂ ಜಗ್ಗುವ ಮಾತೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ (Lakshmi Hebbalkar) ಹೇಳಿದರು.
ಬೆಳಗಾವಿಯಲ್ಲಿ ಶನಿವಾರ (ಸೆ.28) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಜಗ್ಗುವ ಮಾತೇ ಇಲ್ಲ. ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ರಾಜಭವನಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದರು.
6 ಸಾವಿರ ಕೋಟಿ ಮೊತ್ತದ ಎಲೆಕ್ಟೋರಲ್ ಬಾಂಡ್ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಡಿನೋಟಿಫೈ ಹಗರಣದಲ್ಲಿ ಸಿಲುಕಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ರಾಜೀನಾಮೆ ನೀಡಲಿ. ನಂತರ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಬಿಜೆಪಿಯವರು ಮಾತನಾಡಲಿ ಎಂದು ಸಚಿವರು ತಿರುಗೇಟು ನೀಡಿದರು.
ಬಿಜೆಪಿಯವರಿಗೆ ಚುನಾವಣೆ ಗೆಲ್ಲುವುದಷ್ಟೇ ಕೆಲಸವಾಗಿದೆ. ನಮಗೆ ಅತಿವೃಷ್ಠಿ, ಅನಾವೃಷ್ಟಿ ಆದಾಗ ಹಣ ಕೊಡದ ಕೇಂದ್ರ ಸರ್ಕಾರ, ನಮ್ಮ ಪಾಲಿನ ಜಿಎಸ್‌ಟಿ ಮೊತ್ತವನ್ನು ಕೊಡಲಿಲ್ಲ. ಕೇವಲ ರಾಜಕೀಯ ಪ್ರೇರಿತವಾಗಿ ಕರ್ನಾಟಕವನ್ನು ನೋಡುತ್ತಿದೆ ಎಂದು ಹೆಬ್ಬಾಳ್ಕರ್ ಆರೋಪಿಸಿದರು.
ಬೇರೆ ರಾಜ್ಯಗಳ ಚುನಾವಣಾ ಪ್ರಚಾರದ ವೇಳೆ ಮೋದಿ ಮುಡಾ ಹಗರಣ ಪ್ರಸ್ತಾಪಿಸುವ ಮೂಲಕ ಕರ್ನಾಟಕ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಕರ್ನಾಟಕದ ಹೆಸರು ಕೆಡಿಸಿ ಚುನಾವಣೆಯಲ್ಲಿ ಗೆಲ್ಲುವುದೇ ಮುಖ್ಯವಾಗಿದೆ ಎಂದು ಟೀಕೆ ಮಾಡಿದರು.