Advertisement

Orissa ರೈಲು ದುರಂತ: ಮತ್ತೂಂದು ತಂಡ ತಾಯ್ನಾಡಿಗೆ

10:50 PM Jun 04, 2023 | Team Udayavani |

ಬೆಂಗಳೂರು: ರೈಲ್ವೆ ದುರಂತದಲ್ಲಿ ರಾಜ್ಯದ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ನೇತೃತ್ವದ ತಂಡ ರವಿವಾರ ಕೆಲವು ಕನ್ನಡಿಗರನ್ನು ಗುರು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿದೆ.

Advertisement

ಇಡೀ ದಿನ ಸಚಿವರ ತಂಡ ರಕ್ಷಣ ಕಾರ್ಯದಲ್ಲಿ ಸಕ್ರಿಯವಾಗಿತ್ತು. ಒಡಿಶಾ ಸರಕಾರದ ಅಧಿಕಾರಿಗಳು, ರೈಲ್ವೆ ಸಚಿವರೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಮೃತಪಟ್ಟವರು ಅಥವಾ ಗಾಯಾಳುಗಳಲ್ಲಿ ಕನ್ನಡಿಗರಿದ್ದರೆ, ಅಂತಹವರ ಬಗ್ಗೆ ತಮಗೆ ಮಾಹಿತಿ ಒದಗಿಸುವಂತೆ ಮನವಿ ಮಾಡಿತು.ಈ ಮಧ್ಯೆ ಒಡಿಶಾದ ಪುರಿಯಲ್ಲಿ ನಡೆಯುತ್ತಿದ್ದ “ಜಾನಪದ ಮೇಳ- 2023″ರಲ್ಲಿ ಭಾಗವಹಿಸಲು 17 ಜನ ಕಲಾವಿದರು ತೆರಳಿದ್ದರು. ರೈಲ್ವೆ ದುರಂತದ ಹಿನ್ನೆಲೆಯಲ್ಲಿ ಅವರಿಗೆ ರೈಲು ಮತ್ತು ಬಸ್‌ ಸಿಗದೆ ಅತಂತ್ರರಾಗಿದ್ದರು. ಅವರನ್ನು ಭೇಟಿಮಾಡಿದ ಸಚಿವ ಸಂತೋಷ್‌ ಲಾಡ್‌, ಮೂರು ವಿಮಾನಗಳಲ್ಲಿ ಬೆಂಗಳೂರಿಗೆ ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಿದ್ದಾರೆ.

ಸಂಜೆ 17 ಜನರ ತಂಡವು ಇಂಡಿಗೊ, ಏರ್‌ ಏಷ್ಯಾ ನಾಗರಿಕ ವಿಮಾನಗಳಲ್ಲಿ ಪ್ರತ್ಯೇಕವಾಗಿ ಒಡಿಶಾದಿಂದ ತೆರಳಿದ್ದು, ಸೋಮವಾರ ಬೆಳಗ್ಗೆ ಇಲ್ಲಿಗೆ ಬಂದಿಳಿಯಲಿದೆ. ಅದರಲ್ಲಿ ಏಳು ಮಹಿಳೆಯರು ಮತ್ತು 10 ಪುರುಷರಿದ್ದಾರೆ. ಈ ನಡುವೆ 32 ಜನರ ಬಾಲಕ- ಬಾಲಕಿಯರು ಮತ್ತು ಕೋಚ್‌ ಸೇರಿ ವಾಲಿಬಾಲ್‌ ಪಟುಗಳ ತಂಡವು ರವಿವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ರೈಲು ದುರಂತದಲ್ಲಿ ಒಟ್ಟಾರೆ ಸುಮಾರು 280 ಜನ ಸಾವನ್ನಪ್ಪಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಅದರಲ್ಲಿ ಯಾರೊಬ್ಬರೂ ಕನ್ನಡಿಗರಿಲ್ಲ. ಮೃತರ ಪೈಕಿ 48-50 ಮೃತದೇಹಗಳ ಗುರುತು ಪತ್ತೆಯಾಗಿದ್ದು, ಉಳಿದವರನ್ನು ಗುರುತಿಸುವ ಕಾರ್ಯ ರೈಲ್ವೆ ಮತ್ತು ಒಡಿಶಾ ಸರಕಾರದಿಂದ ನಡೆದಿದೆ. ಒಂದು ವೇಳೆ ಯಾರಾದರೂ ಕನ್ನಡಿಗರು ಸಿಲುಕಿರುವುದು ಕಂಡುಬಂದರೆ, ತತ್‌ಕ್ಷಣ ತಮಗೆ ತಿಳಿಸುವಂತೆಯೂ ಹೇಳಿದ್ದೇವೆ ಎಂದು ಕರ್ನಾಟಕ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ಉದಯವಾಣಿಗೆ ತಿಳಿಸಿದರು.

ಸಚಿವರ ತಂಡ ಇಂದು ವಾಪಸ್‌?
ಸಂತ್ರಸ್ತರ ರಕ್ಷಣ ಕಾರ್ಯ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಚಿವ ಸಂತೋಷ್‌ ಲಾಡ್‌ ನೇತೃತ್ವದ ತಂಡ ಸೋಮವಾರ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ. ಜೂನ್‌ 3ರಂದು ಮಧ್ಯಾಹ್ನ ಸಚಿವರು ಮತ್ತು ಅಧಿಕಾರಿಗಳ ತಂಡ ಭುವನೇಶ್ವರಕ್ಕೆ ಧಾವಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next