Advertisement

ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

05:19 PM Feb 18, 2022 | Team Udayavani |

ಬೆಂಗಳೂರು: ಭಿಕ್ಷಾಟನೆ ನಿರ್ಮೂಲನೆಗಾಗಿ ಮೊದಲು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಸಂಪೂರ್ಣವಾಗಿ ರಕ್ಷಿಸಿ, ನಂತರ ಹಂತ ಹಂತವಾಗಿ ಸಾಮಾನ್ಯ ಭಿಕ್ಷುಕರು ಮತ್ತು ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದನ್ನು ತಡೆಯಲು ಕ್ರಮಕೈಗೊಳ್ಳಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

Advertisement

ಮಕ್ಕಳು ಮತ್ತು ತಾಯಂದಿರು ಹಸುಗೂಸುಗಳನ್ನು ಬಳಸಿ ಭಿಕ್ಷಾಟನೆ ಮಾಡುವ ಸಮಸ್ಯೆಯ ಕುರಿತು ಕೈಗೊಳ್ಳಬಹುದಾದ ಪರಿಣಾಮಕಾರಿ ಕ್ರಮಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.

ಭಿಕ್ಷಾಟನೆಯನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಬೇಕಾಗಿರುವುದರಿಂದ ಪ್ರಾರಂಭಿಕವಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಣೆ ಮಾಡಲು ಮೂಲಭೂತ ತಯಾರಿಗಳನ್ನು ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ನಗರವನ್ನು ಭಿಕ್ಷುಕ ರಹಿತ ನಗರವನ್ನಾಗಿಸಲು ಕೇಂದ್ರ ಸರಕಾರದ ಯೋಜನೆಯಡಿ ಭಿಕ್ಷುಕರ ಸಮೀಕ್ಷೆ ನಡೆಸಲು ನಾಗರಬಾವಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಗೆ ವಹಿಸಲಾಗಿದೆ. ಕೇಂದ್ರ ಪರಿಹಾರ ಸಮಿತಿ ಅವರೊಂದಿಗೆ ಸಭೆ ನಡೆಸಿ ಶೀಘ್ರ ಸಮೀಕ್ಷೆ ಪೂರ್ಣಗೊಳಿಸಿ ವರದಿ ಪಡೆಯಲು ಸಚಿವ ಕೋಟ ನಿರ್ದೇಶನ ನೀಡಿದರು.

ಭಿಕ್ಷುಕರ ಉಪಕರ ಸಂಗ್ರಹಕ್ಕೆ ಸೂಚನೆ

Advertisement

ನಗರಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಭಿಕ್ಷುಕರ ಉಪಕರವನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡಲು ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮುಖ್ಯಸ್ಥರು ನಿರ್ದೇಶಿಸುವಂತೆ ಸಚಿವರು ಆದೇಶಿಸಿದರು.

ಕೇಂದ್ರ ಪರಿಹಾರ ಸಮಿತಿಯಲ್ಲಿ ಸಭೆ ನಡೆಸಿದಂತೆ ಇತರೆ ಜಿಲ್ಲಾ ಕೇಂದ್ರಗಳಲ್ಲಿಯೂ ಸಭೆ ನಡೆಸಿ ಭಿಕ್ಷಾಟನೆ ನಿರ್ಮೂಲನೆ ಮಾಡುವುದರ ಜೊತೆಗೆ ಭಿಕ್ಷುಕರ ಉಪಕರವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಇದನ್ನೂ ಓದಿ:ಕುಡಿದು ವಾಹನ ಚಲಾಯಿಸಿ ಪೊಲೀಸರ ನಿಂದನೆ: ನಟಿ ಕಾವ್ಯಾ ಥಾಪರ್ ಬಂಧನ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಾನಸಿಕ ಅಸ್ವಸ್ಥ ನಿರಾಶ್ರಿತರ ಪುನರ್ವಸತಿಗಾಗಿ ಅಲ್ಪಾವಧಿ ಮತ್ತು ದೀರ್ಘಾವಧಿ ಪುನರ್ವಸತಿ ಕಲ್ಪಿಸಲು ಮೂಲಭೂತ ಸೌಕರ್ಯಗಳಿಗೆ ಅನುದಾನ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಿಕ್ಷಾಟನೆ ನಿರ್ಮೂಲನೆ ಕುರಿತು ಸಮಾಜ ಕಲ್ಯಾಣ, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಇತರೆ ಸಂಬಂಧಿತ ಇಲಾಖೆಗಳು ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.

ಮಕ್ಕಳನ್ನು ಬಳಸಿಕೊಂಡು ಭಿಕ್ಷೆ ಬೇಡುವ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಬೀದಿ ಬದಿ ಸಿಗ್ನಲ್‌ಗಳಲ್ಲಿ ಮಕ್ಕಳ ಭಿಕ್ಷಾಟನೆ ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next