Advertisement

ಸಿಗಂದೂರು ವಿಚಾರದಲ್ಲಿ  ಹಸ್ತಕ್ಷೇಪ ಇಲ್ಲ: ಕೋಟ

07:01 PM Nov 17, 2020 | Suhan S |

ಕುಂದಾಪುರ: ಸಿಗಂದೂರು ಕ್ಷೇತ್ರದ ವಿವಾದದ ಕುರಿತು ಆ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಾಗೂ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ. ಈ ಹಿಂದಿನ ಆಡಳಿತ ಮಂಡಳಿಯಲ್ಲೇ ನಡೆಸಬೇಕೆಂದು ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಸಿಗಂದೂರು ಆಡಳಿತದ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ,ಮಧ್ಯಪ್ರವೇಶ ಮಾಡಿಲ್ಲ. ಸಿಎಂ ಕೂಡಾ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಅವರು ಮಂಗಳವಾರ ಇಲ್ಲಿನ ಮಿನಿವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಕೊಲ್ಲೂರು ಆಡಳಿತ ಮಂಡಳಿಗೆ ಸರಕಾರ ನಿಯಮದಂತೆ 9 ಮಂದಿಯನ್ನು ನೇಮಿಸಿದೆ. 150 ಕ್ಕಿಂತ ಅಧಿಕ ಅರ್ಜಿಗಳಿದ್ದವು. ಆ 9 ಮಂದಿಯೇ ಒಟ್ಟಾಗಿ ಅಧ್ಯಕ್ಷರ ಆಯ್ಕೆ ನಡೆಸಲಿದ್ದಾರೆ. ಅದು ಸದ್ಯದಲ್ಲೇ ನಡೆಯಲಿದೆ. ಯಾವುದೇ ರೀತಿಯ ಗೊಂದಲ, ಬಣ ಇತ್ಯಾದಿಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಲೇಜು ಆರಂಭದ ಕುರಿತು ಪ್ರತಿಕ್ರಿಯಿಸಿದ ಅವರು, ಪದವಿ ಕಾಲೇಜುಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್‌ಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ತೊಂದರೆಗಳಿದ್ದಲ್ಲಿ ಆರೋಗ್ಯ ಇಲಾಖೆ  ಸಿಬಂದಿಯೇ ಕಾಲೇಜಿಗೆ ತೆರಳಿ ಪರೀಕ್ಷೆ ನಡೆಸಲಿದ್ದಾರೆ. ಕಾಲೇಜು ಪ್ರವೇಶಕ್ಕೆ ಸಾಂಪ್ರದಾಯಿಕ ಲ್ಯಾಬ್‌ ಟೆಸ್ಟೇ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ:ಡಿಗ್ರಿ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸುರಕ್ಷತೆ ಪರಿಶೀಲಿಸಿದ ಡಿಸಿಎಂ

ಕೋವಿಡ್ ಕಾರಣಗಳಿಂದಾಗಿ ಬಾಕಿಯಾದ ಮುಜರಾಯಿ ಇಲಾಖೆಯ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಕೋವಿಡ್‌ ನಿಯಮಗಳಿಗೆ ಅನುಗುಣವಾಗಿ ನಡೆಯಲಿದೆ. ಕೋಟೇಶ್ವರ ಕೋಟಿಲಿಂಗೇಶ್ವರ, ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಕೊಡಿ ಹಬ್ಬ ಸಾಂಪ್ರದಾಯಿಕವಾಗಿ ಕೋವಿಡ್‌ 19 ಮಾರ್ಗಸೂಚಿ ಅನ್ವಯವೇ ನಡೆಯಲಿದೆ ಎಂದರು.

Advertisement

ಕೊಡೇರಿ ಬಂದರಿನಲ್ಲಿ ಮೀನು ಹರಾಜು ಪ್ರಕ್ರಿಯೆ ಕುರಿತು ಮಾತಾನಾಡಿದ ಅವರು ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಉಂಟಾದ ಗೊಂದಲವನ್ನು ಮೀನುಗಾರಿಕಾ ಇಲಾಖೆ ನಿರ್ದೇಶಕರಿಗೆ ತಿಳಿಸಲಾಗಿದೆ. ಅವರು ಇಲ್ಲಿಗೆ ಆಗಮಿಸಿ ಕೊಡೇರಿ ಉಪ್ಪುಂದ ಮೀನುಗಾರರ ಜತೆ ಮಾತುಕತೆ ನಡೆಸಿ ವರದಿ ನೀಡಿದ್ದು ಜಿಲ್ಲಾಧಿಕಾರಿಗಳು ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಇದು ಸೂಕ್ಷ್ಮ ವಿಚಾರವಾಗಿದ್ದು ಗೊಂದಲ ಸೌಹಾರ್ದಯುತವಾಗಿ ಪರಿಹಾರವಾಗಿದೆ ಎಂದರು.

ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಸ್ತರಣೆ, ಪುನಾರಚನೆ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರ ಜತೆ ಚರ್ಚಿಸಿ ನಡೆಸುವ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ಈಗ ಪಕ್ಷ ಸಚಿವನಾಗಿರಲು ಸೂಚಿಸಿದ್ದು ಮುಂದಿನ ದಿನಗಳಲ್ಲಿ ಏನು ಮಾಡಲು ಸೂಚಿಸುತ್ತದೆಯೋ ಅದರಂತೆ ನಡೆಯುವೆ. ವಿಧಾನಪರಿಷತ್‌ ಸಭಾಪತಿ ಬದಲಾವಣೆ ಕುರಿತಂತೆ ನಡೆಯುವ ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆ ಕುರಿತು ಈಗಲೇ ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಮುಂದಿನ ದಿನಗಳಲ್ಲೇ ನೋಡೋಣ. ಉಪಚುನಾವಣೆ ಫ‌ಲಿತಾಂಶದಲ್ಲಿ ಮತಯಂತ್ರಗಳು ಸರಿಯಿಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದು ಅವರು ಗೆದ್ದಲ್ಲಿ ಮಾತ್ರ ಸರಿಯಿದೆ, ಗೆಲ್ಲದೇ ಇದ್ದಲ್ಲಿ ಸರಿಯಿಲ್ಲ ಎನ್ನುವ ವಾದ ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವನ್ನು ಸ್ವೀಕರಿಸಬೇಕು. ಹಾಳಾದದ್ದು ಮತಯಂತ್ರಗಳಲ್ಲ ಸಿದ್ದರಾಮಯ್ಯ ಅವರ ಮನಸ್ಸು ಎಂದರು.

ಈ ಸಂದರ್ಭದಲ್ಲಿ ಸಚಿವರು ಸಾರ್ವಜನಿಕರ ಅಹವಾಲು ಸ್ವೀಕಸಿದರು.

Advertisement

Udayavani is now on Telegram. Click here to join our channel and stay updated with the latest news.

Next